ಮೈಸೂರು-ಕೊಡಗು ಟಿಕೆಟ್‌ಗೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ!
ಮಡಿಕೇರಿ, ಜನವರಿ 27 : 'ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾನೂ ಕೂಡಾ ಟಿಕೆಟ್ ಆಕಾಂಕ್ಷಿ' ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ. ಶಾಸಕರ ಹೇಳಿಕೆ ಜಿಲ್ಲಾ ರಾಜಕೀಯದಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.
ಮಡಿಕೇರಿಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು, 'ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧ. ಸ್ಪರ್ಧೆಗೆ ನಾನೂ ಕೂಡಾ ಆಕಾಂಕ್ಷಿ' ಎಂದು ಹೇಳಿದರು.
ಪ್ರಸ್ತುತ ಮೈಸೂರು-ಕೊಡಗು ಕ್ಷೇತ್ರದ ಸಂಸದ ಬಿಜೆಪಿಯ ಪ್ರತಾಪ್ ಸಿಂಹ. ಈಗ 2019ರ ಚುನಾವಣೆ ಎದುರಾಗುತ್ತಿರುವಾಗ ಶಾಸಕರು ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಈ ಹೇಳಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಸಿ.ಎಚ್.ವಿಜಯಶಂಕರ್ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿಯಿಂದ ಪ್ರತಾಪ್ ಸಿಂಹ ಅವರಿಗೆ ಮತ್ತೆ ಟಿಕೆಟ್ ಸಿಗಲಿದೆಯೇ? ಅಥವ ಬೇರೆ ನಾಯಕರು ಹುರಿಯಾಳು ಆಗುವರೇ ಎಂದು ಕಾದು ನೋಡಬೇಕು....

ಶಾಸಕರು ಹೇಳಿದ್ದೇನು?
'ಮೈಸೂರು ಭಾಗದವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಹೀಗಿರುವ ಈ ಬಾರಿ ಕೊಡಗಿನವರಿಗೆ ಅವಕಾಶ ನೀಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿರುವೆ. ಸ್ಪರ್ಧೆಗೆ ನಾನು ಕೂಡಾ ಆಕಾಂಕ್ಷಿ' ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಸಂಸದರು
ಮೈಸೂರು ಮತ್ತು ಕೊಡಗು ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರು 503908 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ? ಕಾದು ನೋಡಬೇಕು.

ಎಚ್.ವಿಶ್ವನಾಥ್ ಕಾಂಗ್ರೆಸ್ ಅಭ್ಯರ್ಥಿ
2014ರ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 472300 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಆದರೆ, ಈಗ ಅವರು ಜೆಡಿಎಸ್ ಪಕ್ಷದಲ್ಲಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಸಿ.ಎಚ್.ವಿಜಯಶಂಕರ್ ಅಭ್ಯರ್ಥಿ?
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿವೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಸಿ.ಎಚ್.ವಿಜಯಶಂಕರ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ಇನ್ನೂ ಉಭಯ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications