ಹೆಂಡತಿ ಶೀಲ ಶಂಕಿಸಿ ಮೂವತ್ತು ಬಾರಿ ಇರಿದು ಕೊಂದ ಪತಿ
ಮಡಿಕೇರಿ, ನವೆಂಬರ್ 4: ಶೀಲ ಶಂಕಿಸಿ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ಮಡಿಕೇರಿಯ ಹೊಸ ಬಡಾವಣೆಯಲ್ಲಿ ನಡೆದಿದೆ. ಮಹಮದ್ ಷರೀಫ್ (27) ಎಂಬಾತ ತನ್ನ ಪತ್ನಿ ಕಾಸರಗೋಡು ಮೂಲದ ಜುಬೈದಾ (25)ಳನ್ನು ಕೊಲೆ ಮಾಡಿದ್ದಾನೆ.
ನವೆಂಬರ್ 2ರಂದು ಈ ಘಟನೆ ನಡೆದಿದ್ದು, ಪೇಂಟಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮಹಮದ್ ಷರೀಫ್ ನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಜುಬೈದಾಳ ದೇಹದ ಮೇಲೆ 30ಕ್ಕೂ ಅಧಿಕ ಇರಿದ ಗಾಯಗಳಾಗಿವೆ.
ಮಡಿಕೇರಿ ನಿವಾಸಿಯಾದ ಮಹಮದ್ ಷರೀಫ್ ಏಳು ವರ್ಷದ ಹಿಂದೆ ಕಾಸರಗೋಡು ಮೂಲದ ಜುಬೈದಾ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿಗಳಿಗೆ 5 ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ವಿವಾಹವಾದ ಪ್ರಾರಂಭದಲ್ಲಿ ಈ ದಂಪತಿ ಅನೋನ್ಯವಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪತಿ, ಪತ್ನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು ಎನ್ನಲಾಗಿದೆ.

ಈ ನಡುವೆ ಪತಿ ಮಹಮದ್ ಷರೀಫ್, ಜುಬೈದಾಳ ಶೀಲವನ್ನು ಶಂಕಿಸಿ ಆಕೆಗೆ ವಿವಾಹ ವಿಚ್ಛೇದನ ನೀಡಲು ಕೂಡ ಮುಂದಾಗಿದ್ದ ಎನ್ನಲಾಗಿದೆ. ಆಕೆಯೊಂದಿಗೆ ಸಂಸಾರ ನಡೆಸಲು ಇಚ್ಛಿಸದ ಷರೀಫ್, ಜುಬೈದಾಳನ್ನು ಆಕೆಯ ಮನೆಗೂ ಬಿಟ್ಟು ಬಂದಿದ್ದ. ತದನಂತರ ಜುಬೈದಾಳನ್ನು ಆಕೆಯ ಮನೆಯವರು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದರು ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ತಮ್ಮ ಮಕ್ಕಳನ್ನು ಮಹಮದ್ ಷರೀಫ್ ತನ್ನ ತಾಯಿಯ ಮನೆಯಲ್ಲಿ ಬಿಟ್ಟಿದ್ದ.
ಶನಿವಾರ ರಾತ್ರಿ ಪತಿ ಪತ್ನಿ ನಡುವೆ ಮತ್ತೆ ಕಲಹ ನಡೆದಿದ್ದು, ಮಹಮದ್ ಷರೀಫ್, ಪತ್ನಿ ಜುಬೈದಾಳಿಗೆ ಚಾಕುವಿನಿಂದ ಮೂವತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಗಲಾಟೆಯ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ನಗರ ಪೊಲೀಸರಿಗೆ ದೂರು ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜುಬೈದಾ, ಬರ್ಬರವಾಗಿ ಕೊಲೆಯಾಗಿರುವುದು ಕಂಡು ಬಂದಿದೆ. ತಕ್ಷಣವೇ ಆರೋಪಿ ಮಹಮ್ಮದ್ ಷರೀಫ್ ನನ್ನು ಪೊಲೀಸರು ವಶಕ್ಕೆ ಪಡೆದರು.












Click it and Unblock the Notifications