ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್: ಕೊಡಗಿನ ಮಳೆಗಾಲದ ಈ ಸಾಹಸ ಕ್ರೀಡೆ ಬಗ್ಗೆ ನಿಮಗೆಷ್ಟು ಗೊತ್ತು..?

ಮಡಿಕೇರಿ, ಜುಲೈ 01: ಕೊಡಗಿನಲ್ಲಿ ಮುಂಗಾರು ಚುರುಕುಗೊಂಡಿದ್ದು ಕಾವೇರಿ ಉಕ್ಕೇರಿ ಹರಿಯುತ್ತಿದ್ದು, ದುಬಾರೆ ಬಳಿ ಕಾವೇರಿ ನದಿ ವಿಶಾಲವಾಗಿ ಹರಿಯುತ್ತಿದ್ದು, ಕಳೆ ಕಟ್ಟಿದ್ದು, ಮಳೆಯಿಲ್ಲದೆ ನಿಂತು ಹೋಗಿದ್ದ ಪ್ರವಾಸೋದ್ಯಮದ ಚಟುವಟಿಕೆಗಳು ಗರಿಗೆದರಿದೆ. ಅದರಲ್ಲೂ ರಿವರ್ ರಾಫ್ಟಿಂಗ್ ಮತ್ತೆ ಶುರುವಾಗಿದ್ದು, ಧುಮ್ಮಿಕ್ಕಿ ಹರಿಯುವ ನದಿಯಲ್ಲಿ ನೀರಾಟವಾಡಲು ಸಾಹಸಿಗರು ಮುಗಿಬೀಳುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಕುಂಭದ್ರೋಣ ಮಳೆ ಸುರಿದ ಪರಿಣಾಮ ಕಾವೇರಿ ಉಕ್ಕಿ ಹರಿದಿತ್ತು. ಹೀಗಾಗಿ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿತ್ತಲ್ಲದೆ, ರಿವರ್ ರಾಫ್ಟಿಂಗ್ ಸೇರಿದಂತೆ ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಇಳಿಮುಖವಾದ ಕಾರಣದಿಂದ ಮತ್ತೆ ದೋಣಿಸಂಚಾರ ಮತ್ತು ರಿವರ್ ರಾಫ್ಟಿಂಗ್ ಆರಂಭಗೊಂಡಿದೆ. ಆದರೆ ಮತ್ತೆ ಮಳೆಯ ಅಬ್ಬರ ಜಾಸ್ತಿಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಸ್ಥಗಿತಗೊಳ್ಳುವ ಸಾಧ್ಯೊತೆಯನ್ನು ತಳ್ಳಿ ಹಾಕುವಂತಿಲ್ಲ.

How Much Do You Know About River Rafting In Kodagu District

ದುಬಾರೆಗೆ ಭೇಟಿ ನೀಡುವ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳಬೇಕಾದರೆ ಕಾವೇರಿ ನದಿ ದಾಟಿ ತೆರಳಬೇಕಿದೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದ ಕಾರಣ ಮೋಟಾರ್ ಬೋಟ್ ಗಳನ್ನು ಅವಲಂಬಿಸಬೇಕಿದೆ. ಇಲ್ಲಿ ಅರಣ್ಯ ಇಲಾಖೆಯ 4 ಮೋಟಾರು ಬೋಟ್ ಗಳ ಮೂಲಕ ಪ್ರವಾಸಿಗರನ್ನು ನದಿ ದಾಟಿಸಿ ಸಾಕಾನೆ ಶಿಬಿರಕ್ಕೆ ಕರೆದೊಯ್ದು ವಾಪಾಸ್ಸು ಕರೆತರಲಾಗುತ್ತದೆ. ಪ್ರವಾಸಿಗರ ಪೈಕಿ ಕೆಲವರು ದುಬಾರೆ ಆನೆ ಶಿಬಿರವನ್ನು ವೀಕ್ಷಿಸುವ ಸಲುವಾಗಿ ಬಂದರೆ ಇನ್ನು ಕೆಲವರು ಮಳೆಗಾಲದಲ್ಲಿ ಇಲ್ಲಿನ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ಗಾಗಿ ಬರುವುದು ವಿಶೇಷ.

ಕ್ರೀಡೆಯನ್ನು ಬಿಟ್ಟು ಕೊಡಗಿನ ಜನರಿಲ್ಲ

ಹಾಗೆನೋಡಿದರೆ ಕೊಡಗಿನಲ್ಲಿ ಮುಂಗಾರು ಮಳೆ ಆರಂಭವಾದರೆ ಕೃಷಿ ಚಟುವಟಿಕೆಗಳ ಜತೆಗೆ ಸಾಹಸಮಯ ಕ್ರೀಡೆ ಹಾಗೂ ಕೆಸರುಗದ್ದೆ ಕ್ರೀಡೆಗಳು ಗರಿಗೆದರುವುದು ಮಾಮೂಲಿಯಾಗಿದೆ. ಇನ್ನು ಬೇಸಿಗೆಯಿರಲಿ, ಮಳೆಗಾಲವಿರಲಿ ಕ್ರೀಡೆಗಳನ್ನು ಬಿಟ್ಟು ಇಲ್ಲಿನವರು ಇರುವ ಮಾತೇ ಇಲ್ಲ. ಸದಾ ಏನಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮಾಮೂಲಿಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ತುಂಬಿ ಹರಿಯುವ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ನಂತಹ ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹೊಸ ಕ್ರೇಜ್ ಆಗಿದ್ದು ಜಿಲ್ಲೆ ಮಾತ್ರವಲ್ಲದೆ ಹೊರಗಿನಿಂದಲೂ ಸಾಹಸಿಗರು ಇಲ್ಲಿಗೆ ಬರುವುದು ವಿಶೇಷವಾಗಿದೆ.

ಹಾಗೆನೋಡಿದರೆ ಕೊಡಗಿನ ಮಳೆ ಇತರೆಡೆಗೆ ಹೋಲಿಸಿದರೆ ಸ್ವಲ್ಪ ಭಿನ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಒಮ್ಮೆ ಪ್ರಾರಂಭವಾಯಿತೆಂದರೆ ಧೋ... ಎಂದು ಇಲ್ಲವೆ ಜಿಟಿ...ಜಿಟಿ...ಸುರಿಯುತ್ತಲೇ ಇರುತ್ತದೆ. ಈ ಮಳೆಗೆ ಮನೆಯಿಂದ ಹೊರಬರುವುದೇ ಒಂದು ಸಾಹಸ. ಅದರಲ್ಲಿಯೂ ಮಳೆಗೆ ಆಟವಾಡುವುದೆಂದರೆ ಸುಲಭದ ಮಾತಲ್ಲ. ಆದರೆ ಕೊಡಗಿನವರು ಹಾಗಲ್ಲ ಸುರಿಯುವ ಮಳೆಗೆ, ಬೀಸುವ ಗಾಳಿಗೆ, ಕೊರೆಯುವ ಚಳಿಗೆ ಮನೆಯೊಳಗೆ ಕಂಬಳಿ ಹೊದ್ದು ಕೂರುವವರಲ್ಲ. ಏನಾದರೊಂದು ಸಾಹಸಮಯ ಕಾರ್ಯ ಮಾಡುತ್ತಲೇ ಇರುತ್ತಾರೆ.

How Much Do You Know About River Rafting In Kodagu District

ರಾಫ್ಟಿಂಗ್ ನಿಂದ ರೋಚಕ ಅನುಭವ ಲಭ್ಯ

ಹೀಗಾಗಿಯೇ ಸಾಹಸಿ ಕ್ರೀಡಾಪ್ರೇಮಿಗಳಿಗಾಗಿಯೇ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ನಡೆಯುತ್ತದೆ. ಈ ಸಾಹಸ ಕ್ರೀಡೆ ಆರಂಭವಾಗಬೇಕಾದರೆ ಧೋ ಎಂದು ಮಳೆ ಸುರಿಯ ಬೇಕು. ಕಾವೇರಿ ನದಿ ಉಕ್ಕಿ ಹರಿಯಬೇಕು. ಅಂತಹ ದಿನಗಳಿಗಾಗಿ ಜಿಲ್ಲೆಯ ಜನ ಕಾಯುತ್ತಾರೆ. ಇದೀಗ ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡು ಕಾವೇರಿ ನದಿ ಉಕ್ಕಿಹರಿದರೆ ಮಾತ್ರ ರಿವರ್ ರಾಫ್ಟಿಂಗ್ ಗೆ ಮಜಾ ಸಿಗುವುದು ಎನ್ನುವುದಂತು ನಿಜ. ಸುರಿಯುವ ಮಳೆಗೆ ಮೈಯೊಡ್ಡಿ, ಉಕ್ಕಿಹರಿಯುವ ನದಿಯಲ್ಲಿ ತೇಲಾಡುತ್ತಾ... ಏಳುತ್ತಾ....ಬೀಳುತ್ತಾ.... ಸಾಗುವ ರಾಫ್ಟಿಂಗ್ ನ್ನು ದೂರದಿಂದ ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ.

ಇನ್ನು ತಾವೇ ಕುಳಿತು ಸಾಗುವುದೆಂದರೆ ಅದು ಮರೆಯಲಾರದ ರೋಚಕ ರಸಾನುಭವ. ದಶಕಗಳ ಹಿಂದೆ ಮೊದಲ ಬಾರಿಗೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್ ದುಬಾರೆಯಲ್ಲಿ ರಿವರ್ ರಾಫ್ಟಿಂಗ್ ಆರಂಭಿಸಿದಾಗ ಇದಕ್ಕೆ ಜಂಗಲ್ ಲಾಡ್ಜ್ನ ಸಹಕಾರವೂ ದೊರೆತಿತ್ತು. ಆರಂಭದಲ್ಲಿ ಪ್ರಚಾರದ ಕೊರತೆ, ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಇದಾದ ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದಂತೆಯೇ ರಿವರ್ ರಾಫ್ಟಿಂಗ್ ಜನಪ್ರಿಯವಾಗತೊಡಗಿತು.

ದುಬಾರೆಯತ್ತ ಮುಗಿ ಬೀಳುತ್ತಿರುವ ಪ್ರವಾಸಿಗರು

ಮೊದಲ ವರ್ಷದಲ್ಲಿ ನೂರರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ ನಂತರದ ವರ್ಷಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹೆಚ್ಚುತ್ತಾ ಹೋಯಿತು. ಹೀಗಾಗಿ ಯಾವಾಗ ಮಳೆಗಾಲ ಆರಂಭವಾಗಿ ಕಾವೇರಿ ಉಕ್ಕಿ ಹರಿದು ರಿವರ್ ರಾಫ್ಟಿಂಗ್ ಆರಂಭವಾಗುತ್ತೋ ಎಂದು ಜನ ಕಾಯುತ್ತಾ ಕೂರುವಂತಾಯಿತು. ದುಬಾರೆಯ ಆನೆ ಶಿಬಿರದಿಂದ ಪ್ರಾರಂಭವಾಗುವ ರಾಫ್ಟಿಂಗ್ ಹೊಸಪಟ್ಟಣ, ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮದ ಸುಮಾರು 11ಕಿ.ಮೀ ಸಾಗಿ ಪಾಲಿಟೆಕ್ನಿಕ್ ಬಳಿ ಅಂತ್ಯಗೊಳ್ಳುತ್ತದೆ. ಉಕ್ಕಿಹರಿಯುವ ನದಿಯಲ್ಲಿ ಇಷ್ಟೊಂದು ದೂರ ಕ್ರಮಿಸುವುದು ಹುಡುಗಾಟವಲ್ಲ ಇದಕ್ಕೆ ಧೈರ್ಯ ಬೇಕು. ಇನ್ನು ರಾಫ್ಟೊಂದರಲ್ಲಿ ಆರು ಮಂದಿ ಒಮ್ಮೆಗೆ ಕುಳಿತು ರಾಫ್ಟಿಂಗ್ ಮಾಡಬಹುದಾಗಿದೆ.

How Much Do You Know About River Rafting In Kodagu District

ರಾಫ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣಿತರು ಇರುವುದರಿಂದ ಭಯಪಡಬೇಕಾಗಿಲ್ಲ. ರಿವರ್ ರಾಫ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕಿಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಇಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಇನ್ನು ರಿವರ್ ರಾಫ್ಟಿಂಗ್ ಗೆ ನಿರ್ಧಿಷ್ಟ ದರವನ್ನು ನಿಗದಿಪಡಿಸಲಾಗಿದೆ. ಅದನ್ನು ನೀಡಿ ಪ್ರವಾಸಿಗರು ರಾಫ್ಟಿಂಗ್ ಮಾಡಬಹುದಾಗಿದೆ. ಮೊದಲೆಲ್ಲ ಮಳೆಗಾಲದಲ್ಲಿ ಪ್ರವಾಸಿಗರು ಇತ್ತ ಸುಳಿಯುತ್ತಿರಲಿಲ್ಲ. ಆದರೆ ರಿವರ್ ರಾಫ್ಟಿಂಗ್ ಆರಂಭಿಸಿದ ಬಳಿಕ ದುಬಾರೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಆದಾಯವೂ ಬರುತ್ತಿದೆ. ಆದ್ದರಿಂದ ರಿವರ್ ರಾಫ್ಟಿಂಗ್ ಕೊಡಗಿನ ಮಳೆಗಾಲದ ಸಾಹಸ ಕ್ರೀಡೆಯಾಗಿ ಗಮನಸೆಳೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+