ಕೊಡಗಿನಲ್ಲಿ ಬಿಜೆಪಿ ನಾಯಕನ ಮನೆ ಮೇಲೆ ಗುಂಡಿನ ದಾಳಿ
ಮಡಿಕೇರಿ: ಬಿಜೆಪಿ ಮುಖಂಡ, ಕೃಷಿ ಮೋರ್ಚಾದ ಜಂಟಿ ಕಾರ್ಯದರ್ಶಿ ಬೊಳ್ಳೆಂಗಡ ದಾದು ಪೂವಯ್ಯ ಅವರ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಬೇಗೂರಿನ ಚೀಣಿವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.

ಪೂವಯ್ಯ ಅವರ ಮನೆಯ ಮೇಲೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಮನೆಯ ಮುಂದಿನ ಬಲಭಾಗದ ಕಿಟಕಿಯ ಗಾಜುಗಳು ಪುಡಿಯಾಗಿವೆ. ಗೋಡೆಗೆ ಗುಂಡು ಬಡಿದಿದ್ದು, ತೂತುಗಳಾಗಿವೆ. ಗುಂಡು ಬಿದ್ದ ಕೋಣೆಯಲ್ಲಿ ಯಾರೂ ಮಲಗಿರಲಿಲ್ಲ. ಇದರಿಂದ ಅನಾಹುತ ತಪ್ಪಿದೆ.
ಘಟನೆ ಸಂದರ್ಭದಲ್ಲಿ ಮಲಗಿದ್ದ ದಾದು ಪೂವಯ್ಯ ಅವರು ಗುಂಡಿನ ಶಬ್ದ ಕೇಳಿದಾಗ ಎದ್ದಿದ್ದರು. ಆದರೆ ಮನೆ ಮೇಲೆ ಗುಂಡಿನ ದಾಳಿ ನಡೆದಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಅಡುಗೆ ಮನೆಯಲ್ಲಿ ಪಾತ್ರೆ ಬಿದ್ದಿರಬಹುದೆಂದು ಸುಮ್ಮನಾಗಿದ್ದಾರೆ.
ಬೆಳಿಗ್ಗೆ ಮನೆಯಿಂದ ಹೊರಗೆ ಬಂದು ನೋಡಿದಾಗ ಗುಂಡು ಹಾರಿಸಿದ ಕುರುಹು ಪತ್ತೆಯಾಗಿದ್ದು, ಕಿಟಿಕಿಯ ಗಾಜುಗಳು ಒಡೆದಿರುವುದು ಕಂಡು ಬಂದಿವೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪೊನ್ನಂಪೇಟೆ ಪೊಲೀಸರು ಹಾಗೂ ಗೋಣಿಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ಪರಿಶೀಲನೆ ನಡೆಸಿದ್ದು ದೂರು ದಾಖಲಿಸಿಕೊಂಡಿದ್ದಾರೆ.
ಸದ್ಯ ಸುತ್ತ ಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾದ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚುನಾವಣಾ ವೇಳೆಯಲ್ಲಿ ಈ ಘಟನೆ ನಡೆದಿರುವುದರಿಂದ ಈ ಭಾಗದ ಜನರಲ್ಲಿ ಭಯ ಹೆಚ್ಚಿದೆ. ಯಾರು ಯಾವ ಕಾರಣಕ್ಕೆ ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.












Click it and Unblock the Notifications