ಮಡಿಕೇರಿ; ಅದೇ ಸ್ಥಳದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ
ಮಡಿಕೇರಿ, ಆಗಸ್ಟ್ 24: ಕೆಎಸ್ಆರ್‌ಟಿಸಿ ಬಸ್ ಮಡಿಕೇರಿಯ ಕೆ. ಎಸ್. ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿಯಾಗಿತ್ತು. ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಶಾಸಕ ಡಾ. ಮಂತರ್ ಗೌಡ ಹಾಗೂ ಮಾಜಿ ಸಚಿವರಾದ ಎಂ. ಸಿ. ನಾಣಯ್ಯ ನೇತೃತ್ವದಲ್ಲಿ ಸಭೆ ನಡೆಯಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಕ್ಯಾಂಟೀನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜನರಲ್ ಕೆ. ಸಿ. ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ ಸಂಬಂಧ ಸುದೀರ್ಘ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಶಾಸಕರು ಮಾತನಾಡಿ, "ಈಗಿರುವ ಸ್ಥಳದ ಬದಲಾವಣೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ಅಭಿಪ್ರಾಯ ನೀಡಬೇಕು" ಎಂದು ಹೇಳಿದರು.

"ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಸಂಬಂಧ ಎಲ್ಲರ ಸಹಕಾರ ಪಡೆಯಲು ಸಭೆ ನಡೆಸಲಾಗುತ್ತಿದೆ. ಸದ್ಯ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣದ ಖರ್ಚು ವೆಚ್ಚವನ್ನು ಭರಿಸಲಾಗುವುದು. ಹೊಸ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈಗಿರುವ ಮಾದರಿಯಲ್ಲಿ ಪ್ರತಿಮೆ ಫಿನಿಶಿಂಗ್ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ. ಜೊತೆಗೆ ಕಾಲಾವಕಾಶ ಬೇಕಿದೆ. ಆದ್ದರಿಂದ ಈಗಿರುವ ಪ್ರತಿಮೆ ಸರಿಪಡಿಸಿ ಶೀಘ್ರವೇ ಪುನರ್ ಸ್ಥಾಪಿಸುವುದು ಅತ್ಯಗತ್ಯವಾಗಿದೆ" ಎಂದರು.
ಶೀಘ್ರವೇ ಪುನರ್ ಸ್ಥಾಪನೆ ಆಗಲಿ; ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ. ಸಿ. ನಾಣಯ್ಯ, "ಈಗಿರುವ ಪ್ರತಿಮೆಯನ್ನು ತ್ವರಿತವಾಗಿ ಪುನರ್ ಸ್ಥಾಪಿಸಬೇಕು. 50 ವರ್ಷಗಳ ಹಿಂದೆ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿತ್ತು. ಜನರಲ್ ತಿಮ್ಮಯ್ಯ ಅವರ 30-35 ಪೋಟೋಗಳನ್ನು ಸಂಗ್ರಹಿಸಿ ಅದರಲ್ಲಿ ಎತ್ತರದ ಪೋಟೋವನ್ನು ಆಯ್ಕೆ ಮಾಡಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಈ ರೀತಿಯ ಪ್ರತಿಮೆ ಈಗ ನಿರ್ಮಿಸುವುದು ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಹೊಸ ಪ್ರತಿಮೆ ಬದಲಾಗಿ, ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ಸ್ಥಾಪಿಸಬೇಕಿದೆ" ಎಂದು ಹೇಳಿದರು.
"ಪ್ರತಿಮೆ ನಿರ್ಮಾಣ ಸಂಬಂಧ ಕೊಡಗು ಜಿಲ್ಲಾಡಳಿತ, ನಗರಸಭೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಂಚಾರ ದಟ್ಟಣೆ, ನಿಯಂತ್ರಣ ಸಂಬಂಧ ಪೊಲೀಸ್ ಇಲಾಖೆ ಅಗತ್ಯ ಕ್ರಮವಹಿಸಬೇಕು. ಒಂದು ತಿಂಗಳೊಳಗೆ ಪ್ರತಿಮೆ ಪುನರ್ ಸ್ಥಾಪಿಸಬೇಕು" ಎಂದು ಎಂ. ಸಿ. ನಾಣಯ್ಯ ತಿಳಿಸಿದರು.
ಮಡಿಕೇರಿ ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ ಮಾತನಾಡಿ, "ಪ್ರತಿಮೆ ನಿರ್ಮಾಣ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರತಿಮೆ ರಿಪೇರಿ ಸಂಬಂಧ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹಾಗೆಯೇ ಪ್ರತಿಮೆ ಜಾಗದಲ್ಲಿ ಫೌಂಡೇಶನ್ ನಿರ್ಮಾಣ ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮಾತನಾಡಿ, "ಮಡಿಕೇರಿ ನಗರಸಭೆ ವ್ಯಾಪ್ತಿಗೆ ಜಾಗ ಬರಲಿದೆ. ಹಾಗಾಗಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಸಂಚಾರ ನಿಯಂತ್ರಣ ಬಗ್ಗೆ ಕ್ರಮವಹಿಸಬೇಕಿದೆ" ಎಂದು ತಿಳಿಸಿದರು.
ಸಭೆಯಲ್ಲಿ ಈಗಿರುವ ಜಾಗದಲ್ಲಿಯೇ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಬೇಕು. ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ಈಗಿನ ಪ್ರತಿಮೆ ಭಗ್ನವಾಗಿದೆ. ಆದ್ದರಿಂದ ಹೊಸ ಪ್ರತಿಮೆ ನಿರ್ಮಾಣ ಮಾಡಬೇಕು. ಈಗಿರುವ ಪ್ರತಿಮೆ ನಿರ್ಮಾಣ ಮಾಡಿ 50 ವರ್ಷ ಕಳೆದಿರುವುದರಿಂದ ಹೊಸ ಪ್ರತಿಮೆ ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಇನ್ನು ಸಭೆಯಲ್ಲಿ ಪ್ರತಿಮೆ ಶೀಘ್ರ ಪುನರ್ ಸ್ಥಾಪನೆ ಸಂಬಂಧ ಸಮಿತಿ ರಚಿಸಬೇಕು. ಹೊಣೆಗಾರಿಕೆಯನ್ನು ಹಂಚಬೇಕು ಎಂಬ ಸಲಹೆ ಬಂದಿತು. ಆಗ ಶಾಸಕರು ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ಕಾರ್ಯಚಟುವಟಿಕೆ ನಡೆಯಲಿದ್ದು, ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಡಿಕೇರಿಯ ವಿವಿಧ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕು ಎಂದು ಸಲಹೆ ಬಂದಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.












Click it and Unblock the Notifications