ಶ್ರೀರಂಗಪಟ್ಟಣ-ಕುಶಾಲನಗರ ನಡುವೆ ಚತುಷ್ಪಥ ರಸ್ತೆ
ಮಡಿಕೇರಿ, ಫೆಬ್ರವರಿ 18; "ಶ್ರೀರಂಗಪಟ್ಟಣ ಮತ್ತು ಕುಶಾಲನಗರ ಮಾರ್ಗದ ಚತುಷ್ಪಥ ರಸ್ತೆ ಕಾಮಗಾರಿಯು 15 ತಿಂಗಳಲ್ಲಿ ಆರಂಭವಾಗಲಿದೆ" ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಭಾಗಂಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ" ಎಂದರು.
"ಸಾರ್ವಜನಿಕರ ಅನುಕೂಲಕ್ಕೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು" ಎಂದು ಸಂಸದರು ಹೇಳಿದರು.

"ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಸರಿಪಡಿಸಬೇಕು. ತಡೆಗೋಡೆ ನಿರ್ಮಾಣ ಮಾಡಬೇಕು. ಜೊತೆಗೆ ಕುಶಾಲನಗರದ ತಾವರೆಕೆರೆ ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ರಸ್ತೆ ಸಂಪರ್ಕ ವ್ಯತ್ಯಯ ಉಂಟಾಗುತ್ತಿದ್ದು, ರಸ್ತೆಯನ್ನು ಎತ್ತರಿಸುವಂತೆ" ಸಂಸದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ಕುಶಾಲನಗರದಲ್ಲಿ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಹಾಗೆಯೇ ಕುಶಾಲನಗರದ 25 ಅಥವಾ 50 ಹಾಸಿಗೆಯ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ" ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications