ಡ್ರಗ್ಸ್ ಪೆಡ್ಲರ್ಸ್ ಬಂಧನ: ಕುಶಾಲನಗರಕ್ಕೆ ಎಲ್ಲಿಂದ ಬರುತ್ತೆ ಡ್ರಗ್ಸ್?
ಮಡಿಕೇರಿ, ಮಾರ್ಚ್ 31: ಕೊಡಗಿನಲ್ಲಿ ಗಾಂಜಾದ ಕಮಟು ವಾಸನೆ ಆಗಾಗ್ಗೆ ಮೂಗಿಗೆ ಬಡಿಯುತ್ತಲೇ ಇರುತ್ತದೆ. ಅದರಲ್ಲೂ ಮೈಸೂರು ಮತ್ತು ಹಾಸನಕ್ಕೆ ಹೊಂದಿಕೊಂಡಿರುವ ಕುಶಾಲನಗರ ಪ್ರವಾಸಿ ತಾಣವಾಗಿರುವುದರಿಂದ ಮತ್ತು ಟಿಬೆಟ್ ಕ್ಯಾಂಪ್, ಕೆಲವು ಕಾಲೇಜುಗಳಿರುವುದರಿಂದ ಗಾಂಜಾ ಮಾರಾಟಗಾರರಿಗೆ ಆಶ್ರಯ ತಾಣವಾಗಿದೆ. ಇದೀಗ ಗಾಂಜಾದ ಜೊತೆಗೆ ಇತರೆ ಮಾದಕ ವಸ್ತು ಮಾರಾಟವಾಗುತ್ತಿರುವ ವಿಚಾರ ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇಲ್ಲಿಗೆ ಗಾಂಜಾವನ್ನು ತಂದು ಮಾರಾಟ ಮಾಡುವ ಮಧ್ಯವರ್ತಿಗಳಿದ್ದಾರೆ. ಜೊತೆಗೆ ಗಾಂಜಾ ವ್ಯಸನಿಗಳು ಈ ವ್ಯಾಪ್ತಿಯಲ್ಲಿರುವುದರಿಂದಾಗಿ ಮಾರಾಟಕ್ಕೆ ಪ್ರಮುಖ ತಾಣವಾಗಿ ಮಾರ್ಪಾಡಾಗಿದೆ ಎಂದರೆ ತಪ್ಪಾಗಲಾರದು.

ಇಲ್ಲಿ ಕೇವಲ ಗಾಂಜಾವಲ್ಲದೆ ಇತರೆ ಮಾದಕ ವಸ್ತುಗಳು ಕೂಡ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಗಾಂಜಾದ ಜೊತೆಗೆ MDMA (Methylenedioxy Methamphetamine) ಎಂಬ ಮಾದಕ ವಸ್ತು ಈ ವ್ಯಾಪ್ತಿಯಲ್ಲಿ ಬಳಕೆಯಾಗುತ್ತಿದ್ದದ್ದು ಬೆಳಕಿಗೆ ಬಂದಿದೆ.
ವ್ಯವಸ್ಥಿತ ಡ್ರಗ್ಸ್ ದಂಧೆ
ಕುಶಾಲನಗರದಲ್ಲಿ ಕಾಲೇಜಿದೆ. ಜೊತೆಗೆ ಪಕ್ಕದಲ್ಲಿಯೇ ಟಿಬೆಟ್ ಕ್ಯಾಂಪ್ ಇದೆ. ಇಷ್ಟೇ ಅಲ್ಲದೆ ಹೊರಗಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರೆಲ್ಲರನ್ನು ಗಮನದಲ್ಲಿಟ್ಟುಕೊಂಡು ಕೆಲವರು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡರೂ ಕೂಡ ಕೆಲವರು ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೀಗ ಕುಶಾಲನಗರ ಪೊಲೀಸರು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸುವ ಮೂಲಕ ಕೇವಲ ಗಾಂಜಾ ಮಾತ್ರವಲ್ಲದೆ ಇನ್ನಿತರ ಮಾದಕ ವಸ್ತುಗಳು ಮಾರಾಟವಾಗುತ್ತಿವೆ ಎಂಬುದು ಬೆಳಕಿಗೆ ಬಂದಿದ್ದು, ಜನ ಬೆಚ್ಚಿ ಬೀಳುವಂತೆ ಮಾಡಿದೆ. ಈ ನಡುವೆ ಕುಶಾಲನಗರ ತಾಲೂಕು ಕೂಡಿಗೆ ಗ್ರಾಮದ ಸೇತುವೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಪೊಲೀಸರಿಗೆ ಸಿಕ್ಕಿ ಬಿದ್ದ ಪೆಡ್ಲರ್ಸ್
ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ದಿನೇಶ್‌ಕುಮಾರ್, ಕುಶಾಲನಗರ ವೃತ್ತ ನೇತೃತ್ವದ ಪುನೀತ್ ಕುಶಾಲನಗರ ಗ್ರಾಮಾಂತರ ಠಾಣೆ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಕಾರ್ಯಾಚರಣೆಗಿಳಿದಿದ್ದರು.
ಈ ವೇಳೆ ಕೇರಳ ಮೂಲದ ಕುಶಾಲನಗರ ನಿವಾಸಿಗಳಾದ ಅಕ್ಬರ್, ಮಹಮ್ಮದ್ ರಫಿ, ರಿಷಿಕುಮಾರ್ ಎಂಬುವರು ಬೈಕ್ ಹಾಗೂ ಸ್ಕೂಟರ್ ನಲ್ಲಿ ಮಾದಕವಸ್ತು ತಂದು ಕೂಡಿಗೆ ಸೇತುವೆ ಬಳಿ ವ್ಯವಹಾರ ನಡೆಸುತ್ತಿದ್ದರು. ಈ ಸಂದರ್ಭ ಮೊದಲೇ ಕಾದು ಕುಳಿತಿದ್ದ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದ್ದರಿಂದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ತಕ್ಷಣ ಅವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅವರ ಬಳಿ ಮಾರಾಟ ಮಾಡಲು ತಂದಿದ್ದ 41 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತು ಮತ್ತು 13 ಗ್ರಾಂ ಗಾಂಜಾ ದೊರೆತಿದೆ. ಈ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅವರ ಬಳಿಯಿದ್ದ ಎರಡು ದ್ವಿಚಕ್ರ ವಾಹನ, ಎರಡು ಮೊಬೈಲ್, 9,500 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಪೆಡ್ಲರ್ಗಳ ಹಿಂದೆ ಬೃಹತ್ ಜಾಲ?
ಆರೋಪಿಗಳ ಹಿಂದೆ ಬೃಹತ್ ಜಾಲವೇ ಅಡಗಿರುವುದನ್ನು ತಳ್ಳಿಹಾಕುವಂತಿಲ್ಲ. ಪೊಲೀಸರು ಸಮಗ್ರ ತನಿಖೆ ನಡೆಸಿದರೆ, ಇದರ ಹಿಂದಿನ ಸೂತ್ರಧಾರಿಗಳು ಯಾರು? ಗಾಂಜಾ ಮತ್ತು ಮಾದಕ ವಸ್ತುಗಳು ಕೊಡಗಿಗೆ ಬರುತ್ತಿರುವುದು ಎಲ್ಲಿಂದ ಎಂಬಿತ್ಯಾದಿ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಹಲವು ಕೂಲಿ ಕಾರ್ಮಿಕರು ಕೂಡ ವ್ಯಸನಿಗಳಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ವಿಚಾರದಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಮಾದಕ ವಸ್ತು ಮಾರಾಟ ಜಾಲವನ್ನು ಬೇರು ಸಹಿತ ಕಿತ್ತು ಹಾಕುವುದು ಅಗತ್ಯವಾಗಿದೆ.












Click it and Unblock the Notifications