ಬದುಕಿ ಬಾಳಿದ ಜಾಗ ವಾಸಕ್ಕೆ ಅಪಾಯಕಾರಿ, ಕಣ್ಣೀರಿಟ್ಟ ಸಂತ್ರಸ್ತರು
Recommended Video

ಮಂಗಳೂರು, ಆಗಸ್ಟ್ 27: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಲ, ಮದೆನಾಡು , ಮಣ್ಣಂಗೇರಿಯಲ್ಲಿ ಭೂ ಕುಸಿತ ಸೇರಿದಂತೆ ಜಲಸ್ಫೋಟದ ಕರಾಳ ದುರಂತ ಸಂಭವಿಸಿ ಹತ್ತು ದಿನ ಕಳೆದಿದೆ. ಅಲ್ಲಿನ ಮೂರು ಗ್ರಾಮಗಳ ನೂರಾರು ನಿವಾಸಿಗಳು ಇನ್ನು ಸುಳ್ಯದ ಅರಂತೋಡು, ಸಂಪಾಜೆ, ಕಲ್ಲಗುಂಡಿಯ ಸಂತ್ರಸ್ತರ ಕೇಂದ್ರದಲ್ಲಿ ದಿನ ದೂಡುತ್ತಿದ್ದಾರೆ.
ದುರಂತ ಸಂಭವಿಸಿದ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ಗುಡ್ಡ ಪ್ರದೇಶದಿಂದ ಓಡಿ ಬಂದಿದ್ದ ಜನರು ಈಗ ರಕ್ಷಣಾ ಸ್ವಯಂ ಸೇವಕರ ನೆರವಿನೊಂದಿಗೆ ಮನೆಗಳತ್ತ ಮರಳುತ್ತಿದ್ದಾರೆ. ಮನೆಯ ಪರಿಸ್ಥಿತಿ ಕಂಡು ಮರುಗುತ್ತಿದ್ದಾರೆ. ಮನೆ ಪರಿಶೀಲಿಸಿ ಸಂತ್ರಸ್ತ ಕೇಂದ್ರಗಳಿಗೆ ಮರಳುವ ಬಹುತೇಕರು ಮನೆಯಲ್ಲಿ ಅಳಿದುಳಿದ ಸಾಮಗ್ರಿಗಳನ್ನು ಹೊತ್ತು ತರುತ್ತಿದ್ದಾರೆ . ಭೂಕುಸಿತದಿಂದ ಮನೆ, ಕೃಷಿ ನೆಲಸಮವಾಗಿದ್ದನ್ನು ಕಂಡು ಕಣ್ಣೀರಿನೊಂದಿಗೆ ಹಿಂತಿರುಗುತ್ತಿದ್ದಾರೆ.
ಆಗಸ್ಟ್ 16 ಮತ್ತು 17 ರಂದು ಸಂಭವಿಸಿದ ಭಾರೀ ಭೂ ಕುಸಿತ ಮತ್ತು ಜಲಸ್ಫೋಟದ ದುರಂತ ಇಲ್ಲಿಯ ಜನರನ್ನು ಎಷ್ಟರ ಮಟ್ಟಿಗೆ ಆತಂಕಿತರನ್ನಾಗಿಸಿದೆ ಎಂದರೆ ಬಾಳಿ ಬದುಕಿದ ಆ ಬೆಟ್ಟ, ಕಣಿವೆಗಳಿಗೆ ಮತ್ತೆ ಮರಳಲು ಹಿಂದೇಟು ಹಾಕುತ್ತಿದ್ದಾರೆ.ಈ ಪ್ರದೇಶದಲ್ಲಿ ಮತ್ತೆ ಮಳೆ ಸುರಿದರೆ ಭೂಕುಸಿತದ ಅಪಾಯ ಇರುವ ಕಾರಣ ಆ ಬೆಟ್ಟಗಳಿಗೆ ಮರಳಲು ಜೋಡುಪಾಲ, ಮಣ್ಣಂಗೇರಿ, ಮದೆನಾಡು ಪ್ರದೇಶದ ಜನರು ಮನಸ್ಸು ಮಾಡುತ್ತಿಲ್ಲ. ಇತರೆಡೆ ವಲಸೆ ಹೊಗುತ್ತೇವೆ ಎನ್ನುತ್ತಿದ್ದಾರೆ.

ಸರಕಾರದಿಂದ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಿಕೊಟ್ಟರೆ ತಮ್ಮ ಮನೆಗಳನ್ನು ಬಿಟ್ಟು ಅಲ್ಲಿಗೆ ತೆರಳು ಸಿದ್ಧರಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸ್ವಯಂಸೇವಕರ ಜೊತೆಗೆ ಬೆಟ್ಟದ ಮೇಲಿರುವ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ.

ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರು ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿಯೂ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಪ್ರದೇಶಗಳು ವಾಸಕ್ಕೆ ಅಪಾಯಕಾರಿ ಎಂದಿದ್ದರು. ಹೀಗಾಗಿ ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇನ್ನೊಂದೆಡೆ ಪಶ್ಚಿಮ ಘಟ್ಟದ ಬ್ರಹ್ಮಗಿರಿ, ಕೂಜುಮಲೆ, ಗಾಳಿಬೀಡು, ವಣಚ್ಚಲ್ಪ ಬೆಟ್ಟ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಈಗಾಗಲೇ ಭಾರೀ ಬಿರುಕು ಬಿಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು ಈ ಬೆಟ್ಟದ ಮೇಲಿನ ಬಿರುಕು ಹಾಗು ಸಂತ್ರಸ್ತರ ಪುನರ್ವಸತಿಯ ಬಗ್ಗೆ ರಾಜ್ಯ ಸರಕಾರ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ.












Click it and Unblock the Notifications