ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ವಿತರಣೆಗೆ ಚಾಲನೆ
ಬಸವನಹಳ್ಳಿಯಲ್ಲಿ 184, ಬ್ಯಾಡಗೊಟ್ಟದಲ್ಲಿ 327 ನಿವೇಶನಗಳನ್ನು ಗುರುತು ಮಾಡಲಾಗಿದೆ. ಆದರೆ ಇದೀಗ 116 ಕುಟುಂಬಗಳು ಹೊರ ಜಿಲ್ಲೆಯಿಂದ ಬಂದು ಸೇರಿಕೊಂಡಿದ್ದಾರೆ ಎನ್ನಲಾಗಿದ್ದು, ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ.
ಮಡಿಕೇರಿ, ಮೇ 12: ದಿಡ್ಡಳ್ಳಿಯ ಆದಿವಾಸಿಗಳನ್ನು ಕೂಡಿಗೆ ಬಳಿಯ ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿ ಅಲ್ಲಿ ಆಶ್ರಯ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಇದೀಗ ಇಲ್ಲಿ ದಿನದಿಂದ ದಿನಕ್ಕೆ ಆಗಮಿಸುತ್ತಿರುವ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಕಾರಣಕ್ಕೆ ಪೊಲೀಸರ ಸಹಕಾರದೊಂದಿಗೆ ದಿಡ್ಡಳ್ಳಿಯಲ್ಲಿದ್ದ ನಿರಾಶ್ರಿತರನ್ನು ಗುರುತಿಸುವ ಕಾರ್ಯವನ್ನು ಜಿಲ್ಲಾಡಳಿತ ನಡೆಸುತ್ತಿದೆ. ದಿಡ್ಡಳ್ಳಿಯಲ್ಲಿ ಗುರುತಿಸಲ್ಪಟ್ಟ ನಿರಾಶ್ರಿತರಿಗೆ ಮಾತ್ರ ನಿವೇಶನ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಬ್ಯಾಡಗೊಟ್ಟದಲ್ಲಿ ನಿವೇಶನ ನೀಡಲು ದಿಡ್ಡಳ್ಳಿಯ ಸುಮಾರು 528 ಕುಟುಂಬಗಳನ್ನು ಗುರುತಿಸಿ ದಾಖಲೆ ನೀಡಲಾಗಿತ್ತು.

ಇದೀಗ ಇಲ್ಲಿ 650ಕ್ಕೂ ಹೆಚ್ಚು ಕುಟುಂಬಗಳು ಬಂದಿರುವುದು ಜಿಲ್ಲಾಡಳಿತಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದರಿಂದ ದಿಡ್ಡಳ್ಳಿಯವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಬಸವನಹಳ್ಳಿಯಲ್ಲಿ 184, ಬ್ಯಾಡಗೊಟ್ಟದಲ್ಲಿ 327 ನಿವೇಶನಗಳನ್ನು ಗುರುತು ಮಾಡಲಾಗಿದೆ. ಆದರೆ ಇದೀಗ 116 ಕುಟುಂಬಗಳು ಹೊರ ಜಿಲ್ಲೆಯಿಂದ ಬಂದು ಸೇರಿಕೊಂಡಿದ್ದಾರೆ ಎನ್ನಲಾಗಿದ್ದು, ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ. ಇದನ್ನರಿತ ಜಿಲ್ಲಾಡಳಿತ ಪೊಲೀಸ್ ಬಿಗಿ ಬಂದೋಬಸ್ತ್‍ನೊಂದಿಗೆ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ಕುಟುಂಬಗಳ ಗುರುತಿಸುವಿಕೆ ನಡೆಸಲಾಗಿದ್ದು, ದಾಖಲೆಯಿದ್ದವರೆಗೆ ಮಾತ್ರ ನಿವೇಶನ ನೀಡಿದ್ದರಿಂದ ಹೊರಗಿನಿಂದ ಬಂದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಹಾದಿ ಹಿಡಿಯುವಂತಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು
ವೀರಾಜಪೇಟೆಯ ದಿಡ್ಡಳ್ಳಿಯಿಂದ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮಕ್ಕೆ ಸ್ಥಳಾಂತರಿಸಿದ ಆದಿವಾಸಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗಿದ್ದು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ರಾಜ್ಯ ಮತ್ತು ರಾಷ್ಟ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ದಿಡ್ಡಳ್ಳಿಯಲ್ಲಿ ನೆಲೆಕಂಡುಕೊಂಡಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಸೋಮವಾರಪೇಟೆಯ ಬ್ಯಾಡಗೊಟ್ಟ ಗ್ರಾಮದ ಬಯಲು ಪ್ರದೇಶಕ್ಕೆ ತಂದುಬಿಟ್ಟಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಸಾವಿರಾರು ಮಂದಿ ಆದಿವಾಸಿಗಳು ಪ್ರಾಣಿಗಳಂತೆ ಬದುಕು ಸಾಗಿಸುವಂತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.












Click it and Unblock the Notifications