Get Updates
Get notified of breaking news, exclusive insights, and must-see stories!

ಇದು ಮಡಿಕೇರಿ ದಸರಾ ನಡೆದು ಬಂದ ಹಾದಿ

ದಸರಾವನ್ನು ಮೈಸೂರು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ಹೊತ್ತಿನಲ್ಲಿ ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ಪೌರಾಣಿಕ ಇತಿಹಾಸಕ್ಕೆ ಸಾಕ್ಷಿಯಾಗುತ್ತದೆ.

ಮಡಿಕೇರಿ ದಸರಾ ಎಂದರೆ ಅಲ್ಲಿ ಅಧಿಕಾರಿಗಳ ದರ್ಬಾರ್ ಇಲ್ಲ. ಸರ್ಕಾರದ ಹಸ್ತಕ್ಷೇಪವಿಲ್ಲ. ಜಾತಿ, ಧರ್ಮಗಳ ಹಂಗುಗಳಿಲ್ಲದೆ ಜನರೇ ಜನರಿಗೋಸ್ಕರ ಆಚರಿಸುವ ಜನೋತ್ಸವವಾಗಿದೆ. ಹಾಗಾಗಿ ಇತರೆಡೆ ಆಚರಿಸಲ್ಪಡುವ ದಸರಾಕ್ಕಿಂತ ಮಡಿಕೇರಿ ದಸರಾ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಜತೆಗೆ ಜನಪ್ರಿಯವಾಗಿದೆ.

ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿ ಗಮನಸೆಳೆಯುತ್ತಿದೆ.

ಮಡಿಕೇರಿಯಲ್ಲಿ ದಸರಾ ಆಚರಣೆ ಇಂದು ನಿನ್ನೆಯದಲ್ಲ ಇದಕ್ಕೆ ಗತ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. 1781ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರು ಎನ್ನುವುದು ಇತಿಹಾಸವಾಗಿದೆ.

ಮಹಾಗಣಪತಿಗೆ ಮೊದಲ ಪೂಜೆ

ಮಹಾಗಣಪತಿಗೆ ಮೊದಲ ಪೂಜೆ

ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃ ಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳ ಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.

ವಿಜಯದಶಮಿಯಂದು ಎಲ್ಲೆಡೆ ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಉತ್ಸವಗಳು ನಡೆಯುತ್ತಿದ್ದವು. ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗುತ್ತಿತ್ತು. ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ ಹೀಗೆ ಎರಡು ಆನೆಗಳು ಮುನ್ನಡೆದರೆ ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಆದರೆ ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ.

ರಾಜರ ಉತ್ಸವ ಬಳಿಕ ಜನೋತ್ಸವ

ರಾಜರ ಉತ್ಸವ ಬಳಿಕ ಜನೋತ್ಸವ

1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜನನ್ನು ಬ್ರಿಟೀಷರು ಸೆರೆಹಿಡಿದರು. ಆ ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರೆಸಿದವು. ಅಲ್ಲದೆ, ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು.

ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು.

ನಿರ್ಬಂಧ ಹೇರಿದರೂ ನಿಲ್ಲದ ದಸರಾ

ನಿರ್ಬಂಧ ಹೇರಿದರೂ ನಿಲ್ಲದ ದಸರಾ

ಹಾಗೆ ನೋಡಿದರೆ ಹಾಲೇರಿ ವಂಶಸ್ಥರ ಕಾಲದಿಂದ ಆರಂಭಗೊಂಡ ಮಡಿಕೇರಿ ದಸರಾ ನಂತರದ ಕಾಲದಲ್ಲಿ ನಿಲ್ಲದೆ ಮುಂದುವರೆಯುತ್ತಾ ಬಂದಿರುವುದು ಇತಿಹಾಸವೇ ಎನ್ನಬೇಕು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಉತ್ಸವವಗಳ ಮೇಲೆ ನಿರ್ಬಂಧ ಹೇರಿದಾಗಲೂ ಮಡಿಕೇರಿ ದಸರಾ ನಿಲ್ಲಲಿಲ್ಲವಂತೆ. ಮುಂದೆ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿಯೂ ಕರಗವನ್ನು ಹೊರಡಿಸುವುದು ನಿಲ್ಲಲಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾ ಅಭಿವೃದ್ಧಿಯತ್ತ ಸಾಗತೊಡಗಿತು.

ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಸ್ತಾನದಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ್ದ ಭೀಮ್‌ಸಿಂಗ್‌ರವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು. ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಬತ್ತು ಆಯಿತು. ಬಳಿಕ ಹನ್ನೊಂದಕ್ಕೆ ಏರಿತಾದರೂ ದಸರಾ ಸಮಿತಿ ಮಂಟಪದ ಸಂಖ್ಯೆಯನ್ನು 10ಕ್ಕೆ ಸೀಮಿತಗೊಳಿಸಿದೆ.

ಜನೋತ್ಸವವಾದ ಮಡಿಕೇರಿ ದಸರಾ

ಜನೋತ್ಸವವಾದ ಮಡಿಕೇರಿ ದಸರಾ

ಅವತ್ತು ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನು ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್.ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸುವ ಮೂಲಕ ಭಜನಾ ಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.

ಆ ದಿನಗಳಲ್ಲಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮವನ್ನು ಅಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ಧಿಷ್ಟ ಸಮಯದಲ್ಲಿ ಹಾದು ಹೋಗುವಂತೆಯೂ ಅಲ್ಲದೆ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಇದರೊಂದಿಗೆ ಮಂಟಪಗಳ ಮೆರವಣಿಗೆಯಲ್ಲಿ ಒಂದು ಧಾರ್ಮಿಕ ಶಿಸ್ತನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು.

ಶೋಭಾಯಾತ್ರೆಗೆ ಧಾರ್ಮಿಕ ನಿಯಮ

ಶೋಭಾಯಾತ್ರೆಗೆ ಧಾರ್ಮಿಕ ನಿಯಮ

ಅದೇನೆಂದರೆ ವಿಜಯದಶಮಿ ದಿನದಂದು ನಡೆಯುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಕರಗಗಳಾಗಲೀ, ಮಂಟಪಗಳಾಗಲೀ ಮೆರವಣಿಗೆಯಲ್ಲಿ ಬರುವಂತಿಲ್ಲ. ಎಲ್ಲಾ ಕರಗಗಳು ಹಾಗೂ ಮಂಟಪಗಳು ಶ್ರೀದಂಡಿನ ಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರವೇ ಬನ್ನಿ ಕಡಿಯಲು ಮೆರವಣಿಗೆಯಲ್ಲಿ ಸಾಗಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು.

ಅದರಂತೆ ದಸರಾ ದಿನದಂದು ಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರಿ ಚೌಟಿ ಮಾರಿಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಕರಗ ಪೂಜೆಯನ್ನು ಸ್ವೀಕರಿಸಿ, ಬಳಿಕ ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸುತ್ತದೆ. ಅದೇ ಸಮಯಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರುತ್ತದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಮೆರವಣಿಗೆ ಸಾಗುತ್ತದೆ.

ಆಕರ್ಷಣೀಯ ದಶಮಂಟಪಗಳು

ಆಕರ್ಷಣೀಯ ದಶಮಂಟಪಗಳು

ಇಂದು ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಮಂಟಪಗಳು ಇಂದು ಹತ್ತಾರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುತ್‌ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ.

ದಸರಾ ಸಮಿತಿಯಿಂದ ಕಾರ್ಯಕ್ರಮ

ದಸರಾ ಸಮಿತಿಯಿಂದ ಕಾರ್ಯಕ್ರಮ

ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದಸರಾ ಸಮಿತಿಯು ಮಡಿಕೇರಿ ದಸರಾಕ್ಕೆ ಮೆರಗು ನೀಡುವ ಉದ್ದೇಶದಿಂದ ಮೈಸೂರು ದಸರಾ ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಮೈಸೂರು ದಸರಾವನ್ನು ವೀಕ್ಷಿಸಿದ ಬಳಿಕ ಪ್ರವಾಹೋಪಾದಿಯಲ್ಲಿ ಜನ ಮಡಿಕೇರಿ ದಸರಾವನ್ನು ವೀಕ್ಷಿಸಲು ಬರುವುದರಿಂದ ವಿವಿಧೆಡೆಯಿಂದ ಮಡಿಕೇರಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು. ಹಾಗಾಗಿಯೇ ಮಡಿಕೇರಿ ದಸರಾದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+