ಕೊಡಗಿನಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಒಂದೆರಡಲ್ಲ..ಶುರುವಾಯ್ತು ಕಾಫಿ ಕಳ್ಳರ ಹಾವಳಿ, ಪೊಲೀಸರು ನೀಡಿದ ಎಚ್ಚರಿಕೆ ಏನು?

ಮಡಿಕೇರಿ, ಜನವರಿ 12: ಕೊಡಗಿನಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಕಾರ್ಮಿಕರ ಸಮಸ್ಯೆ ನಡುವೆಯೂ ಕೊಯ್ಲು ಭರದಿಂದ ಸಾಗುತ್ತಿದೆ. ಈ ಬಾರಿ ಕಾಫಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯುತ್ತಿರುವ ಕಾರಣದಿಂದಾಗಿ ಕಾಫಿ ಮತ್ತು ಕರಿಮೆಣಸನ್ನು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಳೆಗಾರರಿಗೆ ಕಾಫಿ ಫಸಲನ್ನು ಕಾಪಾಡಿಕೊಳ್ಳುವುದೇ ಕಷ್ಟವಾಗಿ ಪರಿಣಮಿಸಿದೆ.

ಕಾಫಿ ವಾರ್ಷಿಕ ಬೆಳೆಯಾಗಿದ್ದು, ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿಯನ್ನು ಬೆಳೆಯುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ರೋಬಸ್ಟಾ ಕಾಫಿಯನ್ನು ಮಡಿಕೇರಿ ಮತ್ತು ವಿರಾಪೇಟೆಯಲ್ಲಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಕೊಯ್ಲು ಈಗಾಗಲೇ ಮುಗಿದಿದ್ದು, ಇದೀಗ ರೋಬಸ್ಟಾ ಕಾಫಿಯ ಕೊಯ್ಲು ಆರಂಭವಾಗಿದೆ.

Coffee Theft Cases Increasing In Kodagu

ಈ ನಡುವೆ ಮಳೆ ಮತ್ತು ಮಳೆ ಮೋಡದ ವಾತಾವರಣ ಇದ್ದುದರಿಂದ ಬೆಳೆಗಾರರು ಆತಂಕಗೊಂಡಿದ್ದರು. ಈ ಸಮಯದಲ್ಲಿ ಹೆಚ್ಚಿನ ಬಿಸಿಲಿನ ಅವಶ್ಯಕತೆಯಿದೆ. ಕೊಯ್ಲು ಮಾಡಿದ ಕಾಫಿ ಹಣ್ಣನ್ನು ಬಿಸಿಲು ಚೆನ್ನಾಗಿ ಬೀಳುವ ಪ್ರದೇಶದಲ್ಲಿ ಹರಡಿ ಒಣಗಿಸಬೇಕಾಗುತ್ತದೆ. ಹೀಗೆ ಹರಡಿ ಒಣಗಿಸುವುದೇ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾರಣ ಕಳ್ಳರು ಹೆಚ್ಚಾಗುತ್ತಿದ್ದು, ಕೆಲವೆಡೆ ಒಣ ಹಾಕಿದ್ದಲ್ಲಿಂದಲೇ ಕಾಫಿಯನ್ನು ಕಳ್ಳತನ ಮಾಡುತ್ತಿರುವುದು ವರದಿಯಾಗಿದೆ. ಹೀಗಾಗಿ ರಾತ್ರಿ ಹಗಲು ಕಾವಲು ಕಾದು ಕಾಫಿಯನ್ನು ಒಣಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು ಎಸ್‌ಪಿ ರಾಮರಾಜನ್ ಹೇಳಿದ್ದೇನು..?

ಇದೆಲ್ಲದರ ಮಧ್ಯೆ ಕಾಫಿ ಹಾಗೂ ಕರಿಮೆಣಸು ಕಳ್ಳತನ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ. ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಎಸ್‌ಪಿ ಕೆ. ರಾಮರಾಜನ್ ಅವರು ಬೆಳೆಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದು ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆಯೂ ಹೇಳಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಕಾಫಿ ,ಮತ್ತು ಕಾಳು ಮೆಣಸು ಬೆಳೆಗಾರರು ಕೊಯ್ಲು ಮಾಡಿರುವ ಕಾಫಿ ಮತ್ತು ಕಾಳು ಮೆಣಸನ್ನು ಸಂಗ್ರಹ ಮಾಡಿರುವ ಸ್ಥಳಗಳಿಂದ ಕಳವು ಮಾಡಿರುವ ಕುರಿತು ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರ ಮಾಡುವವರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಹಾಗೂ ಕಾಫಿ ಮತ್ತು ಕಾಳು ಮೆಣಸು ವ್ಯಾಪರಸ್ಥರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವಂತೆಯೂ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

Coffee Theft Cases Increasing In Kodagu

ಮಾಹಿತಿ ಸಂಗ್ರಹಿಸಿಡಲು ಸೂಚನೆ

ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ)ಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಮತ್ತು ಬೆಳೆ ಖರೀದಿ ಸಂದರ್ಭ ಸಂಶಯ ಉಂಟಾದಲ್ಲಿ ಅಂತಹ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದುಕೊಳ್ಳುವುದು ಹಾಗೂ ಸದರಿ ಮಾರಾಟಗಾರರ ಕುರಿತು ಮತ್ತು ಅವರ ಹಿನ್ನೆಲೆಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ವ್ಯವಹರಿಸಲು ಬೆಳೆಗಾರರಿಗೆ ಸೂಚಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ವ್ಯಾಪರಸ್ಥರ ಪರಿಶೀಲನೆ ಸಂದರ್ಭ ಕಾಫಿ ಮತ್ತು ಕಾಳು ಮೆಣಸು ವ್ಯಾಪರಸ್ಥರು ಖರೀದಿದಾರರ ವಿವರವನ್ನು ಸಂಗ್ರಹಿಸದಿರುವುದು ಕಂಡುಬಂದಲ್ಲಿ ಅಂತಹ ವ್ಯಾಪರಸ್ಥರ ಮೇಲೆ ಸೆಕ್ಷನ್: 411 ಐಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸದರಿಯವರಿಗೆ ನ್ಯಾಯಾಲಯವು 3 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆಗಳಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ

ಇನ್ನು ಬೆಳೆಗಾರರು ಕಾಫಿ ಮತ್ತು ಕರಿಮೆಣಸು ವ್ಯಾಪಾರ ನಡೆಸುವ ಸಂದರ್ಭ ಮಾರಾಟದಾರರ ಕುರಿತು ಸಂಶಯ ಬಂದಲ್ಲಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಿದಲ್ಲಿ ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಎಸ್ ಪಿ ಸಲಹೆ ನೀಡಿದ್ದಾರೆ.

Coffee Theft Cases Increasing In Kodagu

ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಇಲ್ಲದ ಕಾರಣದಿಂದಾಗಿ ಬಹುತೇಕ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಹೀಗಾಗಿ ಕೊಯ್ಲುಗೆ ಯಾರೇ ಬಂದರೂ ಅವರ ಪೂರ್ವಾಪರ ತಿಳಿಯದೆ ಕೆಲಸಕ್ಕೆ ಸೇರಿಸಿಕೊಳ್ಳುವಂತಾಗಿದ್ದು, ಇದರಿಂದ ಸಂಕಷ್ಟಗಳು ಎದುರಾಗುತ್ತಿವೆ. ಬೆಳೆಗಾರರು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಕೆಲಸಗಾರರ ಬಗ್ಗೆ ತಿಳಿದುಕೊಳ್ಳುವುದು ಅವರ ಮಾಹಿತಿ ಜತೆಗೆ ಭಾವಚಿತ್ರಗಳನ್ನು ತೆಗೆದಿಟ್ಟುಕೊಳ್ಳುವುದು ಬಹು ಮುಖ್ಯವಾಗಿದೆ. ಅದರಲ್ಲೂ ಒಂಟಿ ಮನೆಗಳಲ್ಲಿ ವಾಸಿಸುವವರು ಅಪರಿಚಿತರ ಬಗ್ಗೆ ನಿಗಾವಹಿಸುವುದು ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+