ಆಗ ಮೊಟ್ಟೆ..ಈಗ ಹೂವಿನ ಮಳೆ: ಕೊಡಗಿನಲ್ಲಿ ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚಲು ಕಾರಣವೇನು?
ಮಡಿಕೇರಿ, ಜನವರಿ 30: ಈ ಬಾರಿ ಕೊಡಗಿಗೆ ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ಹೂ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತವನ್ನು ನೀಡಲಾಗಿದ್ದು, ಈ ಹಿಂದೆ ಅವರಿಗೆ ಆಗಿದ್ದ ಕಹಿ ಘಟನೆಯನ್ನು ಮರೆಸುವಂತೆ ಮಾಡಿದೆ. ಅಷ್ಟೇ ಅಲ್ಲದೆ ಕಾಲಚಕ್ರದಲ್ಲಿ ಎಲ್ಲವೂ ಬದಲಾಗಿ ಬಿಡುತ್ತದೆ ಎಂಬುದಕ್ಕೆ ಸಿಎಂನ ಕೊಡಗು ಭೇಟಿ ಸಾಕ್ಷಿಯಾಗಿರುವುದು ಎದ್ದು ಕಾಣಿಸುತ್ತಿದೆಯಲ್ಲದೆ ಕೊಡಗಿನ ಕಾಂಗ್ರೆಸ್ ನಲ್ಲಿ ಹುಮ್ಮಸ್ಸು ಮೂಡುವಂತೆ ಮಾಡಿದೆ.
ಕಳೆದ ಒಂದೆರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಕೊಡಗಿನಲ್ಲೀಗ ಕಾಂಗ್ರೆಸ್ ವಿಜಯ ಸಾಧಿಸಿ ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಹೀಗಾಗಿ ಕಾಂಗ್ರೆಸ್ ನ ಹೊಸ ಆಟ ಶುರುವಾಗಿದ್ದು, ಎಲ್ಲೆಡೆಯೂ ಕಾಂಗ್ರೆಸ್ ಮಯ ಎಂಬಂತೆ ಗೋಚರಿಸುತ್ತಿದೆ. ಕಳೆದ ಬಾರಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸುವ ಸಲುವಾಗಿ ವಿಪಕ್ಷ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದಿದ್ದರು. ಈ ವೇಳೆ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು.

ಈ ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ನ್ನು ಗೆಲ್ಲಿಸುವಂತೆ ಮತದಾರರಿಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೆ ಕೊಡಗಿನತ್ತ ಪಾದಯಾತ್ರೆ ಮಾಡುವ ಶಪಥವನ್ನು ಮಾಡಿದ್ದರಾದರೂ ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿತ್ತು. ಆದರೆ ತಮಗಾದ ಅವಮಾನವನ್ನು ಅವರು ಮರೆತಿರಲಿಲ್ಲ. ಮುಂದೆ ವಿಧಾನಸಭಾ ಚುನಾವಣೆ ನಡೆದಾಗ ಬಿಜೆಪಿಯ ಇಬ್ಬರು ಶಾಸಕರು ಸೋತು ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿತ್ತಲ್ಲದೆ, ಬಿಜೆಪಿಯ ಭದ್ರಕೋಟೆ ಛಿದ್ರವಾಗಿತ್ತು.
ಮತ ಸೆಳೆಯುವ ರಾಜಕೀಯ ತಂತ್ರ
ಇದೀಗ ರಾಜ್ಯದಲ್ಲಿ 135 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ಅಧಿಕಾರ ಹಿಡಿದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಇತ್ತೀಚಿಗೆ ಕೊಡಗಿಗೆ ಭೇಟಿ ನೀಡಿದ್ದು ಈ ವೇಳೆ ವಿರಾಜಪೇಟೆಯಲ್ಲಿ ಹೂವಿನ ಸುರಿಮಳೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ಸಂದರ್ಭದಲ್ಲಿ ವೀರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಮೇಲಿದ್ದ ತನ್ನ ಆಕ್ರೋಶವನ್ನು ಹೊರ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸ್ಥಳೀಯ ಸಂಸದ ಪ್ರತಾಪ್ ಸಿಂಹ ಅವರ ಮೇಲೂ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸುವಂತೆಯೂ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಭೇಟಿ ಹಿಂದಿನ ತಮಗಾಗಿದ್ದ ಕಹಿ ಘಟನೆಗೆ ಪ್ರತ್ಯುತ್ತರ ನೀಡುವ ಸಲುವಾಗಿಯೇ ಇತ್ತು ಎನ್ನುವುದು ಒಂದು ಕಡೆಯಾದರೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕಾಂಗ್ರೆಸ್ ನತ್ತ ಮತ ಸೆಳೆಯುವ ರಾಜಕೀಯ ತಂತ್ರವೂ ಆಗಿತ್ತು. ಕೊಡಗಿನ ಮತದಾರರು ಬಿಜೆಪಿಯತ್ತ ಒಲವು ಹೊಂದಿದ್ದು ಕೊಡಗಿನಲ್ಲಿ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಸೆಳೆದುಕೊಂಡರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸುಲಭ ಗೆಲುವು ಸಾಧ್ಯ ಎಂಬ ಆಲೋಚನೆಯೂ ಇಲ್ಲದಿಲ್ಲ.
ಕೊಡಗು ಭೇಟಿ ಕಹಿ ಘಟನೆ ನೆನಪಿಸಿಕೊಂಡ ಸಿಎಂ
ಇನ್ನು ತಮ್ಮ ಕೊಡಗು ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಕೊಡಗಿಗೆ ಆಗಮಿಸಿದ ಸಂದರ್ಭ ನಡೆದ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ನೆನಪಿಸಿಕೊಳ್ಳುತ್ತಾ ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಇಂದು ಬಂದಾಗ ಕೊಡಗಿನ ಸಮಸ್ತ ಸಜ್ಜನ ಜನ ಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಹೇಳಿದ್ದಾರೆ.
ಇನ್ನು ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಹೆಲಿಕಾಫ್ಟರ್ ಮೂಲಕ ವಿರಾಜಪೇಟೆ ಬಳಿಯ ಅಂಬಟ್ಟಿ ಹೆಲಿ ಪ್ಯಾಡ್ ಗೆ ಬಂದಿಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರು, ತಮ್ಮದೇ ಕಾರಿನಲ್ಲಿ ಸ್ವತಃ ತಾವೇ ಚಾಲನೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು.

ಮೈಸೂರು ಲೋಕ ಕ್ಷೇತ್ರ ಗೆಲುವು ಅಗತ್ಯ
ಇದೇ ಸಂದರ್ಭ ಅವರನ್ನು ಕೊಡಗಿನ ಸಾಂಪ್ರದಾಯಿಕ ಕೊಂಬು ಕೊಟ್ಟ್ ವಾಲಗದೊಂದಿಗೆ ಹಾಗೂ ಆದಿವಾಸಿ ತಂಡ ತಮ್ಮದೇ ಆದ ವಿಶಿಷ್ಟ ವಾದ್ಯದೊಂದಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು. ಜೊತೆಗೆ ಸಮಾವೇಶದ ಬಳಿಕ ಶಾಸಕ ಪೊನ್ನಣ್ಣ ಅವರು ಕೊಡಗಿನ ವಿಶೇಷ ತಿನಿಸುಗಳನ್ನು ಮುಖ್ಯಮಂತ್ರಿಗಳಿಗೆ ತಾವೇ ಸ್ವತಃ ಉಣಬಡಿಸಿದ್ದರು. ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಇದೆಲ್ಲವನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಆತಿಥ್ಯಕ್ಕೆ ಖುಷಿಗೊಂಡಿದ್ದಾರೆ. ಒಂದು ವೇಳೆ ಸೇರಿದ ಜನರ ಪ್ರೀತಿ ವಿಶ್ವಾಸ ಮತವಾಗಿ ಪರಿವರ್ತನೆಯಾದರೆ ಮುಂದೆ ಬರಲಿರುವ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದು ಕೊಟ್ಟರೂ ಅಚ್ಚರಿಯಿಲ್ಲ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಿಎಂ ಸಿದ್ದರಾಮಯ್ಯ ಅವರಿಗೆ ಬಹುಮುಖ್ಯವಾಗಿದೆ. ಸಿಎಂ ಕೊಡಗು ಭೇಟಿ ಮುಂದೆ ಯಾವ ರೀತಿಯಲ್ಲಿ ಕಾಂಗ್ರೆಸ್‌ಗೆ ಲಾಭ ತರಬಹುದು ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications