ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ!

ಕೊಡಗು, ಜುಲೈ 16 : ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ತೊರೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಎಲ್ಲೆಂದರಲ್ಲಿ ಜಲನರ್ತನ ಆರಂಭವಾಗಿದೆ. ಇದನ್ನು ನೋಡಲೆಂದೇ ಪ್ರವಾಸಿಗರು ಕೊಡಗಿಗೆ ಬರತೊಡಗಿದ್ದಾರೆ.

ಒಂದು ಕಾಲದಲ್ಲಿ ಮಳೆಗೆ ಹೆದರಿ ಕೊಡಗಿನತ್ತ ಕಾಲಿಡಲು ಪ್ರವಾಸಿಗರು ಭಯ ಪಡುತ್ತಿದ್ದರು. ಆದರೆ, ಬದಲಾದ ಕಾಲಮಾನದಲ್ಲಿ ಕೊಡಗಿನ ಮಳೆಯನ್ನು ಸವಿಯಲೆಂದೇ ಇತ್ತ ಜನರು ಬರತೊಡಗಿದ್ದಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿನ ಮಳೆ ವೈಭವವನ್ನು ಕಣ್ತುಂಬಿಸಿಕೊಂಡು, ಜಲಪಾತ, ಜಲಾಶಯಗಳ ರಮಣೀಯ ನೋಟವನ್ನು ಸವಿಯುತ್ತಾರೆ.

ಮಳೆಗಾಲದಲ್ಲಿ ಕೊಡಗಿಗೆ ಭೇಟಿ ನೀಡಿದಾಗ ನೋಡಬಹುದಾದ ಏಕೈಕ ಸ್ಥಳವೆಂದರೆ ಅದು ಚಿಕ್ಲಿಹೊಳೆ ಜಲಾಶಯ. ಇದು ಪುಟ್ಟದಾದ ಜಲಾಶಯವಾಗಿದ್ದು, ಇಲ್ಲಿ ಅಂಥ ಹೇಳಿಕೊಳ್ಳುವಂತಹ ಕ್ರಸ್ಟ್ ಗೇಟ್‍ಗಳಿಲ್ಲ. ನೀರನ್ನು ನಾಲೆಗಳಿಗೆ ಹರಿಸಲು ಗೇಟ್ ಇದೆಯಾದರೂ ಜಲಾಶಯ ತುಂಬಿದ ಬಳಿಕ ನೀರು ತನ್ನಿಂದ ತಾನೆ ಆಚೆ ಹೋಗುವ ವ್ಯವಸ್ಥೆ ಮಾಡಲಾಗಿದೆ.

ಜಲಾಶಯದಲ್ಲಿ ತುಂಬಿದ ನೀರು ಅರ್ಧ ಚಂದ್ರಾಕೃತಿಯ ತೂಬಿನ ಮೂಲಕ ಹರಿದು ಹೋಗುತ್ತದೆ. ಈ ದೃಶ್ಯವನ್ನು ನೋಡಲು ನೂರಾರು ಪ್ರವಾಸಿಗಳು ಆಗಮಿಸುತ್ತಾರೆ. ಚಿಕ್ಲಿಹೊಳೆ ಜಲಾಶಯ ತನ್ನ ಸೌಂದರ್ಯದ ಮೂಲಕವೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಎಲ್ಲಿದೆ ಚಿಕ್ಲಿಹೊಳೆ ಜಲಾಶಯ?

ಎಲ್ಲಿದೆ ಚಿಕ್ಲಿಹೊಳೆ ಜಲಾಶಯ?

ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿದೆ ಚಿಕ್ಲಿಹೊಳೆ ಜಲಾಶಯ. ಇಲ್ಲಿಗೆ ಹೋಗಲು ಯಾವುದೇ ಬಸ್ ಸೌಲಭ್ಯವಿಲ್ಲ. ಹಾಗಾಗಿ ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್‍ನಲ್ಲಿ ತೆರಳಿ, ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಚಿಕ್ಲಿಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಚಿಕ್ಕ ಜಲಾಶಯವನ್ನು ನಿರ್ಮಿಸಲಾಗಿದೆ.

ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರು. ಇದು ಚಿಕ್ಕ ಜಲಾಶಯವಾದರೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಕೃಷಿಗೆ ನೀರು

ಕೃಷಿಗೆ ನೀರು

ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒಗದಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್‍ಗೇಟ್.

ನೀರು ಹರಿದು ಹೋಗುವುದೇ ಚೆಂದ

ನೀರು ಹರಿದು ಹೋಗುವುದೇ ಚೆಂದ

ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ಹರಿದು ಹೋಗುತ್ತದೆ.

ಮಳೆಸುರಿದು ಜಲಾಶಯ ತುಂಬಿದಾಗ ಹೆಚ್ಚಾದ ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಮಳೆಗಾಲದಲ್ಲಿ ಈ ಮನಮೋಹಕ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಾರೆ.

ಅಭಿವೃದ್ಧಿ ಮರೀಚಿಕೆ

ಅಭಿವೃದ್ಧಿ ಮರೀಚಿಕೆ

ಇಲ್ಲಿಗೆ ನೂರಾರು ಪ್ರವಾಸಿಗರು ಬಂದರೂ ಇದು ಇನ್ನೂ ಅಭಿವೃದ್ಧಿಯಾಗಬೇಕಿದೆ. ಸಂಬಂಧಿಸಿದವರು ಗಮನಹರಿಸಿ ಅಭಿವೃದ್ಧಿಪಡಿಸಿದ್ದೇ ಆದರೆ ಚಿಕ್ಲಿಹೊಳೆ ಜಲಾಶಯ ಜಿಲ್ಲೆಯಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

ಚಿಕ್ಲಿಹೊಳೆ ನೋಡಲು ನೂರಾರು ಪ್ರವಾಸಿಗರು ಬರುತ್ತಾರೆ. ಆದರೆ, ಅದ್ಯಾಕೋ ಗೊತ್ತಿಲ್ಲ ಅಧಿಕಾರಿಗಳು ಇದರತ್ತ ಗಮನಹರಿಸಿದಂತೆ ಕಂಡು ಬರುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+