ಕೊಡಗಿನಲ್ಲಿ ಕುಡಿಯಲೂ ಅಯೋಗ್ಯವಾಗಿದೆ ಕಾವೇರಿ ನೀರು!

By: ಲತೀಶ್ ಪೂಜಾರಿ, ಮಡಿಕೇರಿ
Subscribe to Oneindia Kannada

ಮಡಿಕೇರಿ, ನವೆಂಬರ್ 22 : ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ನೀರಿನ ಗುಣಮಟ್ಟ ಬಹುತೇಕ ಕ್ಷೀಣಿಸುವುದರೊಂದಿಗೆ ಬಿ ದರ್ಜೆಯಿಂದ ಸಿ ದರ್ಜೆಗೆ ಇಳಿಯುತ್ತಿದ್ದು, ನದಿ ನೀರನ್ನು ನೇರವಾಗಿ ಬಳಕೆ ಮಾಡಲು ಯೋಗ್ಯವಾಗಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಗಣೇಶನ್ ಸ್ಪಷ್ಟಪಡಿಸಿದ್ದಾರೆ.

ಅವರು ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಕಾವೇರಿ ನದಿ ತಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಡಗು ಜಿಲ್ಲೆಯಲ್ಲಿ 5 ಕೇಂದ್ರಗಳಲ್ಲಿ ನೀರಿನ ಗುಣಮಟ್ಟವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ನದಿ ನೀರು ಹಲವು ರೀತಿಯಲ್ಲಿ ಕಲುಷಿತಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಕೂಟುಹೊಳೆ, ನಾಪೋಕ್ಲು, ಕುಶಾಲನಗರದ ಬೈಚನಹಳ್ಳಿ, ಕೊಪ್ಪ ಸೇತುವೆ ಮತ್ತು ಕಣಿವೆ ಬಳಿ ನದಿ ನೀರಿನ ಗುಣಮಟ್ಟವನ್ನು ಪ್ರತೀ ತಿಂಗಳು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಕಣಿವೆ ವ್ಯಾಪ್ತಿಯಲ್ಲಿ ಸರಾಸರಿ ನೀರಿನ ಗುಣಮಟ್ಟ ಬಿ ದರ್ಜೆಯಲ್ಲಿದ್ದರೆ ಬೇಸಿಗೆಯಲ್ಲಿ ನೀರಿನ ಗುಣಮಟ್ಟ ಸಿ ದರ್ಜೆಗೆ ಇಳಿಯುತ್ತಿರುವುದಾಗಿ ತಿಳಿಸಿದರು.

ಎಂಥ ನೀರು ಬಳಸಲು ಯೋಗ್ಯ?

ಎಂಥ ನೀರು ಬಳಸಲು ಯೋಗ್ಯ?

ನದಿ ನೀರು ‘ಎ' ದರ್ಜೆಯಲ್ಲಿದ್ದರೆ ಶುದ್ಧೀಕರಿಸದೆ ಬಳಸಬಹುದು. ‘ಬಿ' ದರ್ಜೆಯಲ್ಲಿದ್ದರೆ ಸ್ನಾನಕ್ಕೆ ಉಪಯೋಗಿಸಬಹುದು, ‘ಸಿ' ದರ್ಜೆಗೆ ಇಳಿದಲ್ಲಿ ಶುದ್ಧೀಕರಿಸಿ ಕುಡಿಯಲು ಬಳಸಬೇಕಾಗುತ್ತದೆ, ‘ಡಿ' ದರ್ಜೆಯಲ್ಲಿದ್ದರೆ ವನ್ಯಜೀವಿಗಳು ಮಾತ್ರ ಕುಡಿಯಲು ಯೋಗ್ಯ. ‘ಇ' ದರ್ಜೆ ಕೈಗಾರಿಕೆಗಳಿಗೆ ಮಾತ್ರ ಬಳಕೆ ಮಾಡಬಹುದು ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡ.

ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ

ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ

ಮಂಡಳಿಯ ಅಧಿಕಾರಿಗಳ ತಂಡ ಕುಶಾಲನಗರ ವ್ಯಾಪ್ತಿಯ ದಂಡಿನಪೇಟೆ, ಅಯ್ಯಪ್ಪಸ್ವಾಮಿ ದೇವಾಲಯ ಮತ್ತು ಸಾಯಿ ಬಡಾವಣೆ ಬಳಿ ನದಿ ತಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನದಿಗೆ ನೇರವಾಗಿ ಸೇರುತ್ತಿರುವ ತ್ಯಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮಕೈಗೊಂಡಿದೆ.

ಇಂಗು ಗುಂಡಿ ಮೂಲಕ ಹರಿಸಲು ಸೂಚನೆ

ಇಂಗು ಗುಂಡಿ ಮೂಲಕ ಹರಿಸಲು ಸೂಚನೆ

ಕುಶಾಲನಗರ ಪಟ್ಟಣ ಪಂಚಾಯ್ತಿ ಆರೋಗ್ಯಾಧಿಕಾರಿ ಲಿಂಗರಾಜು ಅವರಿಗೆ ಹಲವು ಸೂಚನೆಗಳನ್ನು ಮಂಡಳಿಯ ಅಧಿಕಾರಿ ಗಣೇಶನ್ ನೀಡಿದರು. ನದಿ ತಟದಲ್ಲಿ ಯಾವುದೇ ನೂತನ ಘಟಕಗಳಿಗೆ ಅವಕಾಶ ನೀಡದಂತೆ ಎಚ್ಚರವಹಿಸಬೇಕು. ಪಟ್ಟಣದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸದೆ ಇಂಗು ಗುಂಡಿ ಮೂಲಕ ಹರಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಅಕ್ರಮ ಕಟ್ಟಡಗಳಿಗೆ ಅವಕಾಶ ಬೇಡ

ಅಕ್ರಮ ಕಟ್ಟಡಗಳಿಗೆ ಅವಕಾಶ ಬೇಡ

ನದಿ ತಟದಿಂದ 500 ಅಡಿಗಳಷ್ಟು ಅಂತರದಲ್ಲಿ ಯಾವುದೇ ವಾಣಿಜ್ಯ ಅಥವಾ ಇತರೆ ಕಟ್ಟಡಗಳಿಗೆ ಅನುಮತಿ ನೀಡಬೇಕೆ ಹೊರತು, ಅಕ್ರಮ ಕಟ್ಟಡಗಳಿಗೆ ಅವಕಾಶ ಕಲ್ಪಿಸದಂತೆ ತಕ್ಷಣ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳಿಗೆ ಮಂಡಳಿಯಿಂದ ಪತ್ರ ಬರೆಯುವುದಾಗಿ ಗಣೇಶನ್ ಈ ಸಂದರ್ಭ ತಿಳಿಸಿದರು.

ಮಾಂಸ ಮಾರಾಟ ಮಳಿಗೆಗೆ ಭೇಟಿ

ಮಾಂಸ ಮಾರಾಟ ಮಳಿಗೆಗೆ ಭೇಟಿ

ಅಧಿಕಾರಿಗಳ ತಂಡ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮಪಂಚಾಯ್ತಿ ಮಾಂಸ ಮಾರಾಟ ಮಳಿಗೆ ಮತ್ತು ಹೆಬ್ಬಾಲೆ ಬಳಿಯ ಶುಂಠಿ ತೊಳೆಯುವ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನದಿಗೆ ಹರಿಯುತ್ತಿದೆ ತ್ಯಾಜ್ಯ ನೀರು

ನದಿಗೆ ಹರಿಯುತ್ತಿದೆ ತ್ಯಾಜ್ಯ ನೀರು

ಘಟಕದಿಂದ ತ್ಯಾಜ್ಯ ನೀರು ನೇರವಾಗಿ ನದಿಗೆ ಹರಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು, ನೀರನ್ನು ತಡೆಗಟ್ಟುವಂತೆ ಸ್ಥಳದಲ್ಲೇ ಆದೇಶ ನೀಡಿದ ಹಿನ್ನೆಲೆಯಲ್ಲಿ ನೀರಿಗೆ ತಡೆಯೊಡ್ಡಲಾಯಿತು. ತ್ಯಾಜ್ಯ ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದಲ್ಲಿ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ಶುಂಠಿ ತೊಳೆಯುವ ಘಟಕಗಳ ಕೊಳೆ

ಶುಂಠಿ ತೊಳೆಯುವ ಘಟಕಗಳ ಕೊಳೆ

ಶಿರಂಗಾಲ, ಅಬ್ಬೂರುಕಟ್ಟೆ ವ್ಯಾಪ್ತಿಯಲ್ಲಿ ಶುಂಠಿ ತೊಳೆಯುವ ಘಟಕಗಳು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪತ್ರ ಪಡೆಯದೆ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ

ಕಾವೇರಿ ನದಿ ಸ್ವಚ್ಛತಾ ಆಂದೋಲನ

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಸಹಾಯಕ ಅಧಿಕಾರಿ ಹಮೀದ ಅವರೊಂದಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಜಗದೀಶ್ ಮತ್ತಿತರರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery water in many places in Madikeri district is contaminated so much that is not worth for drinking. Karnataka Pollution Control Board authorities inspected many villages and instructed the local authorities to take action immediately. Due to drought in Coorg water level too has come down.
Please Wait while comments are loading...