Cauvery Theerthodbhava 2022: ತಲಕಾವೇರಿ 'ತೀರ್ಥೋದ್ಭವ'ಕ್ಕೆ ಮುಹೂರ್ತ ನಿಗದಿ
ಮಡಿಕೇರಿ, ಸೆಪ್ಟಂಬರ್ 16: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ವ್ಯಾಪ್ತಿಯ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಮಹೂರ್ತ ನಿಗದಿ ಆಗಿದೆ.
ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ, ಭಾಗಮಂಡಲದ ಶ್ರೀ ಭಗಂಡೇಶ್ವರ -ತಲಕಾವೇರಿ ದೇವಾಲಯ ವತಿಯಿಂದ ಪ್ರಸ್ತಕ 2022ನೇ ವರ್ಷದ 'ಶ್ರೀ ಕಾವೇರಿ ತುಲಾ ಸಂಕ್ರಮಣ ಮತ್ತು ಪವಿತ್ರ ತೀರ್ಥೋದ್ಭವ' ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಇದರಲ್ಲಿ ಮುಖ್ಯವಾದದ್ದು, ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನ. ಅದನ್ನು ಪವಿತ್ರ ತೀರ್ಥೋದ್ಭವ ಎಂದು ಕರೆಯಲಾಗುತ್ತದೆ. ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕಾರ್ಯದಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಸುಮುಹೂರ್ತ ನಿಗದಿ ಆಗಿದೆ. ಅಕ್ಟೋಬರ್ 17ರಂದು ಸೋಮವಾರ ಸಂಜೆ 7.21ಕ್ಕೆ ಜೀವನದಿಯ ದರ್ಶನವನ್ನು ಕಣ್ತುಂಬಿಕೊಳ್ಳಬಹುದು.

ಮೇಷ ಲಗ್ನದಲ್ಲಿ ಕಾಣಿಸಿಕೊಳ್ಳುವ ಪವಿತ್ರ ತೀರ್ಥೋದ್ಭವ ಸಮಯ ನಿದಗಿಯಾಗುತ್ತಿದ್ದಂತೆ ಕಾವೇರಿ ಉಗಮ ಸ್ಥಾನದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ಅಂದು ಅರ್ಚಕರ ಸಮೂಹ ಬಹ್ಮಕುಂಡಿಕೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಭಕ್ತರಿಗೆ ಜೀವನದಿ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ.
ಜೀವನದಿ ಕಣ್ತುಂಬಿಕೊಳ್ಳಲು ಭಕ್ತರ ಕಾತರ
ಈ ಹಿಂದಿನ ಎರಡು ವರ್ಷ ಕೊರೊನಾ ಪಿಡುಗು ರಾಜ್ಯಾದ್ಯಂತ ಆವರಿಸಿದ್ದರಿಂದ ಪವಿತ್ರ ತೀರ್ಥೋದ್ಭವ ಜಾತ್ರೆ ಅತ್ಯಂತ ಸರಳವಾಗಿ ನಡೆದಿತ್ತು. ಇದರಿಂದಾಗಿ ಅದೇಷ್ಟೋ ಭಕ್ತರ ಆಸೆ ನಿರಾಸೆಯಾಗಿತ್ತು. ಆದರೆ ಈ ಬಾರಿ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳುವ ಅವಕಾಶ ಎಲ್ಲ ಭಕ್ತರಿಗೆ ಧಕ್ಕಲಿದ್ದು, ಈ ಬಾರಿ ಜೀವನದಿ ನೋಡಿ ಪುನೀತರಾಗಲು ಸಾರ್ವಜನಿಕರು ಕಾಯುತ್ತಿದ್ದಾರೆ.
ತೀರ್ಥೋದ್ಭವಕ್ಕೂ ಮುನ್ನ ಸೆಪ್ಟಂಬರ್ 27ರಿಂದಲೇ ವಿವಿಧ ಪೂಜೆಗಳು, ಕಾರ್ಯಕ್ರಮ ನಡೆಯಲಿವೆ. ಸೆ.27ರಂದು 'ಪತ್ತಾಯಕ್ಕೆ ಅಕ್ಕಿ ಹಾಕುವುದು', ಅಕ್ಟೋಬ್ 5ರಂದು 'ಆಜ್ಞಾ ಮುಹೂರ್ತ', ಅಕ್ಟೋಬರ್ 15ರಂದು 'ಅಕ್ಷಯ ಪಾತ್ರೆ ಇರಿಸುವುದು' ನಂತರ ಅಕ್ಟೋಬರ್ 17 'ತೀರ್ಥೋದ್ಭವ' ಜರುಗಲಿದೆ.












Click it and Unblock the Notifications