ಬರಗಾಲ: ಮಡಿಕೇರಿ ನಗರಕ್ಕೆ ದಿನ ಬಿಟ್ಟು ದಿನ ಕುಡಿಯುವ ನೀರು!
ಮಡಿಕೇರಿ, ಮೇ 08: ಈ ಬಾರಿಯ ಬೇಸಿಗೆಗೆ ಜನರು ನಲುಗಿ ಹೋಗಿದ್ದಾರೆ. ಕರಾವಳಿ, ಮಲೆನಾಡು ಎನ್ನದೇ ಎಲ್ಲಾ ಜಿಲ್ಲೆಗಳಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗು ಜಿಲ್ಲೆಯಲ್ಲಿಯೂ ಈಗ ಕುಡಿಯುವ ನೀರಿನ ಕೊರತೆ ಕಂಡುಬಂದಿದೆ.
ಮಡಿಕೇರಿ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಆಗುವ ಕೂಟುಹೊಳೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಶೇಖರಣೆ ಇಲ್ಲದೆ ಪ್ರಸ್ತುತ ಬತ್ತಿ ಹೋಗಿದೆ. ಆದ್ದರಿಂದ ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಆದರೆ ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಮಡಿಕೇರಿ ನಗರದ ಎಲ್ಲಾ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗಲಿದೆ. ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಜನರಿಗೆ ಮನವಿ ಏನು?; ಜನರು ಈ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ನೀರನ್ನು ಮಿತವಾಗಿ ಬಳಸಿ. ಅನುಪಯುಕ್ತವಾಗಿ ಬಳಸದೆ (ಕಾರು, ಸ್ಕೂಟರ್ ಇತ್ಯಾದಿ ವಾಹನಗಳನ್ನು ಕುಡಿಯುವ ನೀರಿನಿಂದ ಶುಚಿಗೊಳಿಸದೇ ಅಲ್ಲದೆ ಮನೆಯ ಹೂ ತೋಟ ಮತ್ತು ಹೂ ಕುಂಡಗಳಿಗೆ ಉಪಯೋಗಿಸದೇ) ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಒಂದು ವೇಳೆ ಇದನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಅನುಪಯುಕ್ತವಾಗಿ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಮತ್ತೆ ಮರುಕಳಿಸಿದ್ದಲ್ಲಿ 1964ರ ಪೌರಸಭೆಗಳ ಅಧಿನಿಯಮದಂತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭೆ: ಕೊಡಗು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಸಂದರ್ಭಾನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಪೂರೈಕೆ ಸಮಸ್ಯೆ ಎದುರಾದಲ್ಲಿ ಹತ್ತಿರದ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಇರುವ ಬೋರ್‌ವೆಲ್‌ಗಳ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಮಟ್ಟದಲ್ಲಿ ಪ್ರತಿ 15 ದಿನಕ್ಕೊಮ್ಮೆ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಏರ್ಪಡಿಸುವ ಮೂಲಕ ಸಮರ್ಪಕ ನೀರು ಪೂರೈಕೆಯಲ್ಲಿನ ತೊಂದರೆಗಳ ನಿವಾರಣೆಗೆ ಮುಂದಾಗಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀಲನೆಯನ್ನು ಸಂದರ್ಭಾನುಸಾರ ನಡೆಸಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಕುಡಿಯುವ ನೀರಿನ ಪೂರೈಕೆ ಸಾರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಇದ್ದರೂ ಅಧಿಕಾರಿಗಳು ನೀರು ಪೂರೈಕೆ ಮಾಡದಿದ್ದಲ್ಲಿ ಅದು ಖಂಡಿತವಾಗಿಯು ಜಿಲ್ಲಾಡಳಿತದ ಗಮನಕ್ಕೆ ಬರಲಿದೆ. ಆಗ ಜಿಲ್ಲಾಡಳಿತದಿಂದ ಸಂಬಂಧಿತ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ. ಅಧಿಕಾರಿಗಳು ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಣೆಗೆ ಮುಂದಾಗಬೇಕು ಎಂದು ಹೇಳಿದರು.
ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಾರ್ಡ್‍ವಾರು ನೀರು ಪೂರೈಕೆ ವಿವರವನ್ನು ಜನಸಾಮಾನ್ಯರಿಗೆ ಪ್ರತಿ ದಿನ ಮಾಧ್ಯಮ ಮೂಲಕ ತಿಳಿಸಿಕೊಡಬೇಕು. ಇದರಿಂದ ನಗರ ಪ್ರದೇಶದ ನಾಗರಿಕರು ನೀರು ಪೂರೈಕೆ ಮಾಡುವ ವೇಳೆಯಲ್ಲಿ ಮನೆಯಲ್ಲಿದ್ದು, ನೀರು ಸಂಗ್ರಹಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.












Click it and Unblock the Notifications