ಕೊಡಗಿನಲ್ಲಿ 800 ಮರ ಕಡಿಯಲು ಅನುಮತಿ, ಡಿಎಫ್‌ಓ ಅಮಾನತು
ಮಡಿಕೇರಿ, ಜೂನ್ 14 : ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳ ಕಡಿತಕ್ಕೆ ಆದೇಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಫ್ಓ ಅವರನ್ನುಅಮಾನತು ಮಾಡಲಾಗಿದೆ. ಮರಗಳನ್ನು ಕಡಿಯಲು ಆದೇಶ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.
ಶುಕ್ರವಾರ ಪ್ರಧಾನ ಅರಣ್ಯ ಸಂರಕ್ಷಣಾಧಿರಿಗಳು ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಅವರನ್ನು ಅಮಾನತು ಮಾಡಿದ್ದಾರೆ. ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮಡಿಕೇರಿ ವಲಯದ ಹೆಚ್ಚಿನ ಹೊಣೆ ನೀಡಲಾಗಿದೆ.
ಕೆ.ನಿಡಗುಣಿ ಗ್ರಾಮದಲ್ಲಿ 808 ಮರಗಳನ್ನು ಕಡಿಯಲು ಡಿಎಫ್‌ಓ ಮಂಜುನಾಥ ಆದೇಶ ನೀಡಿದ್ದರು. ಆದ್ದರಿಂದ, ಕರ್ತವ್ಯ ಲೋಪದ ಕಾರಣದಿಂದಾಗಿ ಅಮಾನತು ಮಾಡಲಾಗಿದೆ. ಉದ್ಯಮಿಯೊಬ್ಬರು ಅರಣ್ಯ ಇಲಾಖೆ ಅನುಮತಿ ಪಡೆದು 100ಕ್ಕೂ ಹೆಚ್ಚಿನ ಮರಗಳನ್ನು ಕಡಿಸಿದ್ದರು.

ನೇರಳೆ, ಹಲಸು, ಬೈನೆ ಸೇರಿದಂತೆ ವಿವಿಧ ಮರಗಳಿಗೆ ಕೊಡಲು ಹಾಕಲಾಗಿತ್ತು. ಜೂನ್ 6ರಂದು ಪ್ರಕರಣ ಬೆಳಕಿಗೆ ಬಂದ ಬಳಿಕ ಮಾಜಿ ಸಚಿವ ಎಂ.ಸಿ.ನಾಣಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಸರ ಪ್ರೇಮಿಗಳು ಮರ ಕಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮರ ಕಡಿಯುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು. ಈ ಕುರಿತು ವರದಿ ನೀಡುವಂತೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.












Click it and Unblock the Notifications