ಉತ್ತರ ಪ್ರದೇಶದಲ್ಲಿ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಎಸ್‌ಪಿ ಅಭ್ಯರ್ಥಿ ಅಜಂ ಖಾನ್!
ನವದೆಹಲಿ, ಜನವರಿ 27: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಜೈಲಿನಲ್ಲಿದ್ದುಕೊಂಡೇ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸೀತಾಪುರ್ ಜೈಲಿನಲ್ಲಿ ಇರುವ ರಾಮ್‌ಪುರ ವಿಧಾನಸಭೆ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಮೊಹಮ್ಮದ್ ಅಜಂ ಖಾನ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಜೈಲು ಸೇರಿರುವ ಅಜಂ ಖಾನ್ ಚುನಾವಣೆ ಸ್ಪರ್ಧೆಗೆ ಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ಆದೇಶದಂತೆ ಚುನಾವಣಾ ಅಧಿಕಾರಿಯು ಜೈಲಿಗೆ ಆಗಮಿಸಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಜೈಲು ಅಧಿಕಾರಿ ಆರ್ಎಸ್ ಯಾದವ್ ತಿಳಿಸಿದ್ದಾರೆ.
ರಾಮ್‌ಪುರ ವಿಧಾನಸಭೆ ಕ್ಷೇತ್ರದಲ್ಲಿ ಗುರುವಾರ ಅಜಂ ಖಾನ್ ನಾಮಪತ್ರಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ಸಲ್ಲಿಕೆಯಾಗಲಿವೆ. ಕಳೆದ 23 ತಿಂಗಳಿನಿಂದ ಜೈಲು ಸೇರಿರುವ ಮೊಹಮ್ಮದ್ ಅಜಂ ಖಾನ್ ವಿರುದ್ಧ ರಾಮ್‌ಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಉಳಿದಿದ್ದರೆ, ಹಲವು ಪ್ರಕರಣಗಳಲ್ಲಿ ಅಜಂ ಖಾನ್ ಜಾಮೀನು ಪಡೆದುಕೊಂಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಅಜಂ ಖಾನ್
ಅಜೀಂನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜೌಹರ್ ವಿಶ್ವವಿದ್ಯಾಲಯದೊಂದಿಗೆ ಶತ್ರು ಆಸ್ತಿಯನ್ನು ವಿಲೀನಗೊಳಿಸಿದ ಪ್ರಕರಣ ಮತ್ತು ಲಕ್ನೋದ ಇನ್ನೊಂದು ಪ್ರಕರಣದಲ್ಲಿ ಮೊಹಮ್ಮದ್ ಅಜಂ ಖಾನ್ ಜಾಮೀನು ಅರ್ಜಿ ಬಾಕಿ ಉಳಿದಿದೆ. ಇದರ ಮಧ್ಯೆ ರಾಮ್‌ಪುರ ನಗರ ವಿಧಾನಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿಯಾಗಿ ಅಜಂ ಖಾನ್ ಹೆಸರು ಘೋಷಿಸಲಾಗಿದೆ. ಖಾನ್ ಪುತ್ರ ಅಬ್ದುಲ್ಲಾ ಅಜಮ್ ರಾಮ್‌ಪುರ ಜಿಲ್ಲೆಯ ಸುವಾರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

ರಾಮ್‌ಪುರ ಜಿಲ್ಲೆಯಲ್ಲಿ ಚುನಾವಣೆ ಕಾದಾಟ
ರಾಮ್‌ಪುರ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕದನ ಕೌತುಕ ಸೃಷ್ಟಿಯಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಅಜಂ ಖಾನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಗಿ ನವಾಬ್ ಖಾಜಿಂ ಅಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಇನ್ನೊಂದು ಕಡೆಯಲ್ಲಿ ಮೊಹಮ್ಮದ್ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಸ್ಪರ್ಧಿಸುತ್ತಿರುವ ಸ್ವಾರ್ ಕ್ಷೇತ್ರದಲ್ಲಿ ಅಪ್ನಾ ದಳ ಅಭ್ಯರ್ಥಿ ಆಗಿ ಹೈದರ್ ಅಲಿ ಖಾನ್ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಜೊತೆ ಇದೇ ಅಪ್ನಾ ದಳ ಪಕ್ಷವು ಮೈತ್ರಿ ಮಾಡಿಕೊಂಡಿದೆ.

ಸಮಾಜವಾದಿ ಪಕ್ಷ ಯಾವುದೇ ಅವಕಾಶ ತಪ್ಪಿಸಿಕೊಳ್ಳಲ್ಲ
ಉತ್ತರ ಪ್ರದೇಶದಲ್ಲಿ ಈ ಬಾರಿ ಗೆಲುವಿನ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಿದ್ಧರಿಲ್ಲ. ಈ ಹಿನ್ನೆಲೆ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜಂ ಖಾನ್ ಮತ್ತು ಅಬ್ದುಲ್ಲಾ ಅಜಂಗೆ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ಆ ಮೂಲಕ ಸಮಾಜವಾದಿ ಪಕ್ಷದಲ್ಲಿ ಬಲಿಷ್ಠ ನಾಯಕ ಎನಿಸಿಕೊಂಡವರಿಗೆ ಮಣೆ ಹಾಕುತ್ತಿದ್ದಾರೆ. ಈ ಹಿನ್ನೆಲೆ ಜೈಲಿನಲ್ಲಿದ್ದರೂ ಅಜಂ ಖಾನ್ ಸಮಾಜವಾದಿ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ಪ್ರಕ್ರಿಯೆ
ಉತ್ತರ ಪ್ರದೇಶದಲ್ಲಿ, ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಫೆಬ್ರವರಿ 14 ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ 59 ಸ್ಥಾನಗಳಿಗೆ, ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಸ್ಥಾನಗಳಿಗೆ, ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ, ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications