UP Election Result 2022: ಗೋರಖ್‌ಪುರ ನಗರ ಯೋಗಿ ಆದಿತ್ಯನಾಥ್ ಮುನ್ನಡೆ
ಲಕ್ನೋ, ಮಾರ್ಚ್ 10: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು 8.30ರ ಸುಮಾರಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಮುನ್ನಡೆ ಸಾಧಿಸಿದ್ದಾರೆ. ಆರನೇ ಹಂತದ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಸ್ಪರ್ಧಿಸಿದ್ದಾರೆ. ಯೋಗಿ ಆದಿತ್ಯನಾಥ್ ವಿರುದ್ಧ ಸಮಾಜವಾದಿ ಪಕ್ಷದಿಂದ ಸುಪ್ರಭವತಿ ಶುಕ್ಲಾ ಅವರು ಕಣದಲ್ಲಿದ್ದಾರೆ.
ಮಾರ್ಚ್ 3ರಂದು ಗುರುವಾರ ಆರನೇ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಆರನೇ ಹಂತದಲ್ಲಿ ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಉತ್ತರ ಪ್ರದೇಶದ 10 ಜಿಲ್ಲೆಗಳ ಒಟ್ಟು 57 ವಿಧಾನಸಭೆ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದ ಅಂಬೇಡ್ಕರ್ ನಗರ, ಬಲರಾಮ್‌ಪುರ, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಮತದಾನ ನಡೆದಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆದ್ದಿತ್ತು.
ಪ್ರಮುಖವಾಗಿ ಗೋರಖ್‌ಪುರ ನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಕುಹಿ ರಾಜ್ ಕ್ಷೇತ್ರದಿಂದ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಫಾಜಿಲ್‌ನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ, ಬನ್ಸ್ದಿಹ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋವಿಂದ್ ಚೌಧರಿ, ಯುಪಿ ಸಚಿವ ಸೂರ್ಯ ಪ್ರತಾಪ್ ಶಾಹಿ ಪಥರ್ದೇವ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಿತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 20ರಂದು ಮೂರನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ತದನಂತರ ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಉತ್ತರಪ್ರದೇಶದಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202.












Click it and Unblock the Notifications