"ಮಾಯಾವತಿಗೆ ಪದ್ಮವಿಭೂಷಣ, ಓವೈಸಿಗೆ ಭಾರತ ರತ್ನ ನೀಡಿ" ಸಂಜಯ್ ರಾವತ್ ವ್ಯಂಗ್ಯ
ಲಕ್ನೋ ಮಾರ್ಚ್ 11: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವು ಸಾಧಿಸಿದೆ. ಈ ವೇಳೆ ಶಿವಸೇನೆ ನಾಯಕ ಮತ್ತು ಸಂಸದ ಸಂಜಯ್ ರಾವತ್, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ ಮತ್ತು ಆಲ್ ಇಂಡಿಯಾ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯ ಗೆಲುವಿನಲ್ಲಿ ಅವರ ಕೊಡುಗೆಗಾಗಿ ಪದ್ಮವಿಭೂಷಣ ಅಥವಾ ಭಾರತ ರತ್ನವನ್ನು ನೀಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅದ್ಭುತ ವಿಜಯವನ್ನು ಸಾಧಿಸಿದೆ. ಯುಪಿ ಅವರ ರಾಜ್ಯವಾಗಿತ್ತು. ಅಖಿಲೇಶ್ ಯಾದವ್ ಅವರ ಸ್ಥಾನಗಳು 42 ರಿಂದ 125 ಕ್ಕೆ 3 ಪಟ್ಟು ಹೆಚ್ಚಾಗಿದೆ. ಮಾಯಾವತಿ ಮತ್ತು ಓವೈಸಿ ಬಿಜೆಪಿಯ ಗೆಲುವಿಗೆ ಕೊಡುಗೆ ನೀಡಿದ್ದಾರೆ, ಆದ್ದರಿಂದ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು" ಎಂದು ರಾವುತ್ ಅವರು ಹೇಳಿದ್ದಾರೆ.
BJP achieved a great victory. UP was their state, still, Akhilesh Yadav's seats have increased 3 times, from 42 to over 125. Mayawati & Owaisi have contributed to BJP's win, so they must be given Padma Vibhushan, Bharat Ratna: Shiv Sena leader Sanjay Raut#ElectionResults2022 pic.twitter.com/1p8LLiluG7
— ANI (@ANI) March 11, 2022
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ, ಉತ್ತರಾಖಂಡದಲ್ಲಿ ಅದರ ಮುಖ್ಯಮಂತ್ರಿ ಸೋತರು. ಗೋವಾದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಸೋಲನ್ನು ಎದುರಿಸಿದರು. ಪಂಜಾಬ್‌ನಲ್ಲಿ ಪಕ್ಷವನ್ನು "ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ" ಎಂದು ರಾವುತ್ ವಾಗ್ದಾಳಿ ಮಾಡಿದ್ದಾರೆ.

"ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಎಲ್ಲರೂ ಪಂಜಾಬ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಹಾಗಾದರೆ ಪಂಜಾಬ್‌ನಲ್ಲಿ ಬಿಜೆಪಿ ಏಕೆ ಸೋತಿದೆ? ಯುಪಿ, ಉತ್ತರಾಖಂಡ, ಗೋವಾ ಈಗಾಗಲೇ ನಿಮ್ಮದಾಗಿದ್ದವು. ಆದರೆ ಕಾಂಗ್ರೆಸ್‌ಗೆ ಹೋಲಿಸಿದರೆ ನೀವು ಪಂಜಾಬ್ ಹಾಗೂ ಯುಪಿಯಲ್ಲಿ ಹೆಚ್ಚು ಸೋತಿದ್ದೀರಿ" ಎಂದು ಸೇನಾ ಸಂಸದರು ಹೇಳಿದ್ದಾರೆ.
ಬಿಎಸ್‌ಪಿ- ಎಐಎಂಐಎಂ ಪಕ್ಷಗಳು ಬಿಜೆಪಿ 'ಬೀ-ಟೀಮ್' ಆಗಿದ್ದು ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ಅನೇಕರು ಆರೋಪಿಸಿದ್ದಾರೆ. ಆದರೆ ಇಂತಹ ಆರೋಪಗಳನ್ನು ಎರಡೂ ಪಕ್ಷಗಳು ಪದೇ ಪದೇ ನಿರಾಕರಿಸಿವೆ.

ಬಿಎಸ್‌ಪಿ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಸೋಲಿನ ನಂತರದ ಮೊದಲ ಪ್ರತಿಕ್ರಿಯೆಯಲ್ಲಿ, ಮಾಯಾವತಿ ಬಿಎಸ್‌ಪಿ ಬಿಜೆಪಿಯ "ಬಿ-ಟೀಮ್" ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಮಾಧ್ಯಮ ವೇದಿಕೆಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ತಮ್ಮ ಪಕ್ಷವು ಮಾತ್ರ ಬಿಜೆಪಿಯನ್ನು ಸೋಲಿಸಬಲ್ಲದು ಎಂದು ಒತ್ತಿ ಹೇಳಿದರು. ಜೊತೆಗೆ ಓವೈಸಿ ಅವರು ಸಾರ್ವಜನಿಕರ ನಿರ್ಧಾರವನ್ನು ಗೌರವಿಸುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು "ವೋಟ್ ಬ್ಯಾಂಕ್‌ಗಳಾಗಿ ಬಳಸಲಾಗಿದೆ" ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 403 ಸ್ಥಾನಗಳಲ್ಲಿ ಒಟ್ಟು 273 ಸ್ಥಾನಗಳನ್ನು ಗೆದ್ದಿವೆ. ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಸ್ವಂತ ಬಲದಿಂದ 111 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರ ನೇತೃತ್ವದ ಮೈತ್ರಿಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದು ಸಮಾಜವಾದಿ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
ಮಾಯಾವತಿಯವರ ಪಕ್ಷವು ಶೇಕಡಾ 12.8 ರಷ್ಟು ಮತಗಳನ್ನು ಪಡೆದುಕೊಂಡಿದೆ. ಜೊತೆಗೆ ಇದು ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. AIMIM ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ ಮತ್ತು ಅದರ ಮತಗಳ ಪಾಲು ಶೇಕಡಾ 0.49 ರಷ್ಟಿದೆ.












Click it and Unblock the Notifications