ಯುಪಿ 6ನೇ ಹಂತದ ಚುನಾವವಣೆ: ಒಟ್ಟು ಕ್ಷೇತ್ರ, ಅಭ್ಯರ್ಥಿ, ಮತದಾನದ ಸಂಕ್ಷಿಪ್ತ ಮಾಹಿತಿ
ಲಕ್ನೋ, ಮಾರ್ಚ್ 2: ಉತ್ತರ ಪ್ರದೇಶದಲ್ಲಿ ಆರನೇ ಹಂತದ ವಿಧಾನಸಭೆ ಚುನಾವಣಾ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯ ಹಿರಿಯ ನಾಯಕರು ಮತದಾರರನ್ನು ಸೆಳೆಯಲು ಕೊನೆಯ ಹಂತದ ಪ್ರಯತ್ನ ನಡೆಸುವುದರೊಂದಿಗೆ ಈ ಹಂತದ ಪ್ರಚಾರವನ್ನು ಮಂಗಳವಾರ ಸಂಜೆ ಕೊನೆಗೊಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಉರುಳಿಸಲು ತುದಿಗಾಲ ಮೇಲೆ ನಿಂತಿವೆ.

ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 3ರ ಗುರುವಾರ ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಆರನೇ ಹಂತದಲ್ಲಿ ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.
10 ಜಿಲ್ಲೆಗಳ 57 ಕ್ಷೇತ್ರಗಳಿಗೆ ಚುನಾವಣೆ:
ಉತ್ತರ ಪ್ರದೇಶದ 10 ಜಿಲ್ಲೆಗಳ ಒಟ್ಟು 57 ವಿಧಾನಸಭೆ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಅಂಬೇಡ್ಕರ್ ನಗರ, ಬಲರಾಮ್‌ಪುರ, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಾಗಿವೆ. 2017ರ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆದ್ದಿತ್ತು.
6ನೇ ಹಂತದ ಚುನಾವಣಾ ಕಣದ ಕಲಿಗಳು:
ಪ್ರಮುಖವಾಗಿ ಗೋರಖ್‌ಪುರ ನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಕುಹಿ ರಾಜ್ ಕ್ಷೇತ್ರದಿಂದ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಫಾಜಿಲ್‌ನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ, ಬನ್ಸ್ದಿಹ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋವಿಂದ್ ಚೌಧರಿ, ಯುಪಿ ಸಚಿವ ಸೂರ್ಯ ಪ್ರತಾಪ್ ಶಾಹಿ ಪಥರ್ದೇವ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಎಕ್ಸಿಟ್ ಪೋಲ್ ಫಲಿತಾಂಶ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಅಭಿಪ್ರಾಯ ಸಂಗ್ರಹವನ್ನು ಈ ವರ್ಷದ ಜನವರಿಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಬಿಡುಗಡೆ ಮಾಡಲಾಗಿದೆ. ಬಹುಪಾಲು ಸಮೀಕ್ಷೆಗಳು ಸಮಾಜವಾದಿ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ನಿಕಟ ಸ್ಪರ್ಧೆಯೊಂದಿಗೆ ಬಿಜೆಪಿಗೆ ನೀಡಿವೆ. ಚುನಾವಣಾ ಆಯೋಗವು ಮಾರ್ಚ್ 7 ರಂದು ಸಂಜೆ 6 ಗಂಟೆಯವರೆಗೆ ಎಕ್ಸಿಟ್ ಪೋಲ್‌ಗಳ ಪ್ರಸಾರವನ್ನು ನಿಷೇಧಿಸಿದೆ. ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.












Click it and Unblock the Notifications