ಶಾಸಕನ ಜತೆ 'ಸೆಟ್ಲ್' ಮಾಡ್ಕೋ: ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರ ಸಲಹೆ!
ಲಕ್ನೋ, ಜುಲೈ 30: ಉತ್ತರ ಪ್ರದೇಶದಲ್ಲಿ ಮತ್ತೆ ತೀವ್ರ ಸುದ್ದಿಯಲ್ಲಿರುವ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಒಂದೊಂದೇ ಅಂಶಗಳು ಹೊರಬರುತ್ತಿವೆ.
ಅತ್ಯಾಚಾರ ಸಂತ್ರಸ್ತೆಯನ್ನು ಕೊಲೆ ಮಾಡಲು ರಸ್ತೆ ಅಪಘಾತದ ನಾಟಕ ನಡೆಸಲಾಗಿದೆ ಎಂಬ ಆರೋಪದ ನಡುವೆಯೇ ಆಕೆಯ ಕುಟುಂಬದವರು ತಮಗೆ ಎದುರಾದ ಬೆದರಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅತ್ಯಾಚಾರದ ಆರೋಪಿಯಾಗಿರುವ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗರ್, ಜೈಲಿನಲ್ಲಿದ್ದುಕೊಂಡೇ ತನ್ನ ಪ್ರಭಾವ ಬಳಸಿ ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಜೈಲಿನಲ್ಲಿ ಇರುವ ಕುಲದೀಪ್ ಸಿಂಗ್, ಫೋನ್ ಮೂಲಕ ಜೈಲಿನಿಂದಲೇ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು.

ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆಯ ಚಿಕ್ಕಪ್ಪ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆಗ ಪೊಲೀಸರು, ಕುಲದೀಪ್ ಸಿಂಗ್ ಅವರು ಆಡಳಿತಾರೂಢ ಬಿಜೆಪಿಯ ಶಾಸಕ ಎಂದು ಹೇಳಿದ್ದರು. ತಾವು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಅವರು, ರಾಜಿಯಾಗುವಂತೆಯೂ ಸಲಹೆ ನೀಡಿದ್ದರು.
ಬಳಿಕ ಜೈಲು ಸೇರಿದ್ದ ಕುಲದೀಪ್ ಸಿಂಗ್, ಜೀವಂತವಾಗಿ ಉಳಿಯಬೇಕೆಂದರೆ ತಮ್ಮ ಹೇಳಿಕೆಗಳನ್ನು ಬದಲಿಸಿಕೊಳ್ಳಬೇಕು ಎಂದು ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಅವರು ತಿಳಿಸಿದ್ದಾರೆ.
ಶಾಸಕನ ಬೆಂಬಲಿಗರು, ಪ್ರಕರಣವನ್ನು ಅವರೊಂದಿಗೆ ರಾಜಿ ಮಾಡಿ ಇತ್ಯರ್ಥಪಡಿಸದೆ ಹೋದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇಡೀ ಸರ್ಕಾರವೇ ಶಾಸಕನ ಪರವಾಗಿದೆ ಎಂದು ಕೂಡ ಅವರು ಬೆದರಿಕೆ ಹಾಕಿದ್ದಾಗಿ ಮಹಿಳೆಯ ಚಿಕ್ಕಪ್ಪ ಆರೋಪಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ, ಆಕೆಯ ಚಲನವಲನಗಳ ಬಗ್ಗೆ ಕುಲದೀಪ್ ಸಿಂಗ್‌ಗೆ ಮಾಹಿತಿ ನೀಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಅತ್ಯಾಚಾರ ಎಸಗಿ, ಆಕೆಯ ತಂದೆಯನ್ನು ಕೊಲೆ ಮಾಡಿದ್ದಲ್ಲದೆ, ಈಗ ತನ್ನನ್ನು ಜೈಲು ಪಾಲಾಗುವಂತೆ ಮಾಡಿದ್ದ ಮಹಿಳೆಯನ್ನು ಅಪಘಾತದ ಮೂಲಕ ಕೊಲ್ಲಲು ಪ್ರಯತ್ನಿಸಿದ ಬಿಜೆಪಿ ಶಾಸಕನ ವಿರುದ್ಧ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ, ಜೈಲಿನಲ್ಲಿದ್ದುಕೊಂಡೇ ಅವರಿಗೆ ಬೆದರಿಕೆಗಳನ್ನು ಹಾಕಿದ್ದು, ಕೊಲೆಯ ಸಂಚು ರೂಪಿಸಿದ್ದು, ಸರ್ಕಾರದ ಬೆಂಬಲವಿಲ್ಲದೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ನಡೆದರೂ ಶಾಸಕನನ್ನು ಪಕ್ಷದಿಂದ ಉಚ್ಚಾಟನೆ ಮಾಡದೆ ಇರುವುದರ ಬಗ್ಗೆ ಬಿಜೆಪಿಯ ನಡೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
'ಬಿಜೆಪಿ ಯಾವುದಕ್ಕೆ ಕಾಯುತ್ತಿದೆ? ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚಿನ ಎಫ್‌ಐಆರ್‌ನಲ್ಲಿ ಅವರ ಹೆಸರು ದಾಖಲಾದರೂ ಕೂಡ ಪಕ್ಷ ಅವರನ್ನು ಏಕೆ ಉಚ್ಚಾಟನೆ ಮಾಡುತ್ತಿಲ್ಲ? ಎಂದು ಅವರು ಕೇಳಿದ್ದಾರೆ.












Click it and Unblock the Notifications