Breaking: ಯುಪಿಯಲ್ಲಿ ಅತ್ಯಾಚಾರ ದೂರು ದಾಖಲು, ಸಂತ್ರಸ್ತೆಯ ಅಪಹರಣ
ಲಕ್ನೋ, ಜುಲೈ 28: ಉತ್ತರ ಪ್ರದೇಶದ ಶಾಜಹಾನ್‌ಪುರದಲ್ಲಿ ತನ್ನ ಶಾಲೆಯ ಮ್ಯಾನೇಜರ್‌ನ ಪತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದ 22 ವರ್ಷದ ಶಿಕ್ಷಕಿಯನ್ನು ಅಪಹರಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ದೂರು ನೀಡಿದ್ದ ಮಹಿಳೆ ನಾಪತ್ತೆಯಾಗಿದ್ದು, ಆರೋಪಿಯನ್ನು ಇನ್ನೂ ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾಗಿರುವ ಆರೋಪಿ ವ್ಯಕ್ತಿ, ಶಿಕ್ಷಕಿಯನ್ನು ಯಾವುದೋ ಕೆಲಸದ ನಿಮಿತ್ತ ಶಹಜಹಾನ್‌ಪುರಕ್ಕೆ ಕರೆದೊಯ್ದು ಅಲ್ಲಿ ಹೋಟೆಲ್‌ನಲ್ಲಿ ಅತ್ಯಾಚಾರ ಎಸಗಿ ಅಪರಾಧದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಎಫ್‌ಐಆರ್ ಅನ್ನು ಉಲ್ಲೇಖಿಸಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸಂಜೀವ್ ಬಾಜ್‌ಪೈ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಮತ್ತು ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಆರೋಪಿಗಳು ಪದೇ ಪದೇ ಶೋಷಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಎರಡು ದಿನಗಳ ಹಿಂದೆ ನಡೆದ ಘಟನೆಯನ್ನು ಮಹಿಳೆ ತನ್ನ ಮನೆಯವರಿಗೆ ತಿಳಿಸಿದಾಗ, ಅವರು ಆರೋಪಿ ಮನೆಗೆ ಹೋಗಿ ಪ್ರಶ್ನಿಸಿದ್ದರು. ಆದರೆ, ಆರೋಪಿ ಬೆದರಿಸಿ ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ಘಟನೆ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದ ಆರೋಪಿ ಮಹಿಳೆಯನ್ನು ಆಕೆಯ ಮನೆಯಿಂದ ಅಪಹರಿಸಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 366 (ಅಪಹರಣ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications