ಲಖೀಂಪುರ್ ಹಿಂಸಾಚಾರ: ಸಾಕ್ಷಿದಾರರಿಗೆ ರಕ್ಷಣೆ ಕೊಡಲು ಸುಪ್ರೀಂಕೋರ್ಟ್ ನಿರ್ದೇಶನ
ಲಕ್ನೋ, ಅಕ್ಟೋಬರ್ 26: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿರುವ ಹಿಂಸಾಚಾರ ಪ್ರಕರಣದ ಸಾಕ್ಷಿದಾರರಿಗೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತು. ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗಳ ಎದುರು ಇತರೆ ಸಂಬಂಧಿತ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವಂತೆ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರಾದ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಗರಿಮಾ ಪ್ರಸಾದ್ ರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
"ಸಿಆರ್‌ಪಿಸಿಯ ಸೆಕ್ಷನ್ 164ರಡಿ ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲಿಸುವ ಕಾರ್ಯವನ್ನು ಲಭ್ಯವಿರುವ ಹತ್ತಿರದ ಮ್ಯಾಜಿಸ್ಟ್ರೇಟ್‌ಗಳಿಗೆ ವಹಿಸಲು ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶಿಸುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಹೇಳಿದೆ.

ಪುರಾವೆಗಳ ಕುರಿತು ವರದಿ ಸಲ್ಲಿಕೆಗೆ ಸೂಚನೆ:
ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತಜ್ಞರ ಸಮಿತಿ ಸಿದ್ಧಪಡಿಸಿದ ವರದಿಯ ವಿದ್ಯುನ್ಮಾನ ಪುರಾವೆಗಳನ್ನು ಸಿದ್ಧಪಡಿಸುವಂತೆ ಸರ್ಕಾರಿ ಪರ ವಕೀಲ ಹರೀಶ್ ಸಾಳ್ವೆರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಎರಡು ದೂರುಗಳಿಗೆ ಸಂಬಂಧಿಸಿದಂತೆ ವರದಿ:
ಉತ್ತರ ಪ್ರದೇಶ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪತ್ರಕರ್ತನ ಹತ್ಯೆಗೆ ಸಂಬಂಧಿಸಿದ ದೂರಿನ ಜೊತೆಗೆ ಎರಡು ದೂರುಗಳ ಬಗ್ಗೆ ತನ್ನ ವರದಿಯನ್ನು ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದೆ. "ಪ್ರಕರಣಗಳಲ್ಲಿ ಪ್ರತ್ಯೇಕ ಉತ್ತರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ" ಎಂದು ಪೀಠ ಹೇಳಿದ್ದು, ನವೆಂಬರ್ 8ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.

ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಸೂಚನೆ:
ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ತನಿಖೆಯು "ಅಂತ್ಯವಿಲ್ಲದ ಕಥೆ" ಆಗಬಾರದು ಎಂದು ಹೇಳಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 20ರಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪೊಲೀಸರು ತಮ್ಮ ಕಾಲೆಳೆಯುತ್ತಿರುವ ಭಾವನೆ ಮೂಡುತ್ತಿದ್ದು, ಸಾಕ್ಷಿಗಳಿಗೆ ರಕ್ಷಣೆ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು. ಇಡೀ ಪ್ರಕರಣದ 44 ಸಾಕ್ಷಿಗಳ ಪೈಕಿ ಈವರೆಗೂ ಕೇವಲ 4 ಸಾಕ್ಷಿಗಳ ಹೇಳಿಕೆಯನ್ನು ಸಂಗ್ರಹಿಸಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಿತ್ತು.
ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 44 ಸಾಕ್ಷಿಗಳ ಪೈಕಿ 4 ಸಾಕ್ಷಿಗಳ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಎದುರು ಉಳಿದ 40 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಸೂಚನೆ ನೀಡಿತ್ತು.
ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಹಿನ್ನೆಲೆ:
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಈ ಸಂಬಂಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ ಆರೋಪ ಮಾಡಲಾಗಿದ್ದು, ಅಕ್ಟೋಬರ್ 9ರಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.












Click it and Unblock the Notifications