ಯುಪಿ: ಸಿಎಂ ಯೋಗಿ ವಿರುದ್ಧ ಕಪ್ಪು ಬಾವುಟ ತೋರಿದ ವಿದ್ಯಾರ್ಥಿನಿಗೆ ಎಸ್‌ಪಿ ಟಿಕೆಟ್!
ಲಕ್ನೋ, ಫೆಬ್ರವರಿ 1: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು 10 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. 2017ರಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಸ್ಪರ್ಧಿಸಿ ಸೋತ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಲಾಗಿದೆ.
ಲಕ್ನೋ ಉತ್ತರ ವಿಧಾನಸಭೆ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದಿಂದ ಪೂಜಾ ಶುಕ್ಲಾರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಆಗಿ ರಾಜು ಗಾಂಧಿ ಅಖಾಡಕ್ಕೆ ಇಳಿಯುವುದು ಪಕ್ಕಾ ಆಗಿದೆ.
ಪೂಜಾ ಶುಕ್ಲಾ, ಕಳೆದ 2017ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. 2017 ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಅವರು ಲಕ್ನೋ ಕಂಟೋನ್ಮೆಂಟ್ ವಿಧಾನಸಭೆ ಕ್ಷೇತ್ರದಲ್ಲಿ ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು.

ಸಿಎಂ ಯೋಗಿ ವಿರುದ್ಧ ಕಪ್ಪು ಬಾವುಟ ಪ್ರದರ್ಶನ:
''ಪಕ್ಷವು ಪೂಜಾ ಶುಕ್ಲಾ ಅವರನ್ನು ಲಕ್ನೋ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮವೊಂದಕ್ಕೆ ಲಕ್ನೋ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಗಳಲ್ಲಿ ಪೂಜಾ ಶುಕ್ಲಾ ಕೂಡಾ ಒಬ್ಬರಾಗಿದ್ದರು," ಎಂದು ಸಮಾಜವಾದಿ ಪಕ್ಷದ ಎಂಎಲ್‌ಸಿ ಮತ್ತು ವಕ್ತಾರ ಸುನಿಲ್ ಸಿಂಗ್ ಸಜನ್ ಹೇಳಿದ್ದಾರೆ.
— Samajwadi Party (@samajwadiparty) February 1, 2022
ಜೂನ್ 2017ರಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಲಕ್ನೋ ವಿಶ್ವವಿದ್ಯಾಲಯದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಛತ್ರ ಸಭಾ ಮತ್ತು ಇತರ ವಿದ್ಯಾರ್ಥಿ ಗುಂಪಿನ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಅಂದು ಲಕ್ನೋ ವಿಶ್ವವಿದ್ಯಾಲಯದಿಂದ ಅಮಾನತುಗೊಂಡ ಎಂಟು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪೂಜಾ ಶುಕ್ಲಾ ಕೂಡ ಇದ್ದರು.
ಇವರ ಹೊರತಾಗಿ ಪಕ್ಷವು ಉನ್ನಾವ್‌ನ ಬಂಗಾರ್‌ಮೌದಿಂದ ಮುನ್ನಾ ಅಲ್ವಿ, ರಾಯ್ ಬರೇಲಿಯ ಬಚ್ರವನ್-ಎಸ್‌ಸಿಯಿಂದ ಶ್ಯಾಮ್ ಸುಂದರ್ ಭಾರತಿ, ಸುಲ್ತಾನ್‌ಪುರದ ಇಸ್ಸೌಲಿಯಿಂದ ತಾಹಿರ್ ಖಾನ್ ಮತ್ತು ಬಂಡಾದ ಬಾಬೇರುದಿಂದ ವಿಷಂಭರ್ ಯಾದವ್ ಅವರನ್ನು ಕಣಕ್ಕಿಳಿಸಿದೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications