
ಅಯೋಧ್ಯೆಯ ಅದ್ಧೂರಿ ದೀಪೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ
ಲಕ್ನೋ, ಅಕ್ಟೋಬರ್, 23: ಪ್ರಧಾನಿ ನರೇಂದ್ರ ಮೋದಿ ಅವರು ಬೆಳಕಿನ ಹಬ್ಬ ದೀಪಾವಳಿಗೂ ಒಂದು ದಿನ ಮೊದಲೇ ಅಯೋಧ್ಯೆಯಲ್ಲಿ ಭಾನುವಾರ ಅದ್ಧೂರಿ ದೀಪೋತ್ಸವದಲ್ಲಿ ಪಾಲ್ಗೊಂಡು ರಾಮ್ ಲಲ್ಲಾ ದರ್ಶನ ಪಡೆದರು. ವಿಶೇಷ ಪೂಜೆ ನೆರವೇರಿದ ನಂತರ ಪ್ರಧಾನಿಗಳು ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಭಾನುವಾರ ಸಂಖ್ಯೆ ಅಯೋಧ್ಯೆ ಆವರಣ ಲಕ್ಷಾಂತರ ದೀಪಗಳಿಂದ ಕಂಗೊಳಿಸಿತ್ತು. ರಾಮಕಥಾ ಉದ್ಯಾನವನ್ನು ಹೂ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವದಲ್ಲಿ ಪಾಲ್ಗೊಂಡರು.
ಪಿಎಂ ಮೋದಿ ದೀಪಾವಳಿ ಜಾಬ್ ಫೆಸ್ಟ್: 10 ಲಕ್ಷ ಜನರಿಗೆ ಉದ್ಯೋಗ
ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಆರತಿ, ಪೂಜೆ ಅರ್ಪಿಸಿ ಆಶೀರ್ವಾದ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದ ನಕ್ಷೆ ಕುರಿತು ವೀಕ್ಷಿಸಿದರು. ಬಳಿಕ ಅಧಿಕಾರಿಗಳ ಜೊತೆಗೆ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು ಪರಿಶೀಲಿಸಿ ಮಾಹಿತಿ ಪಡೆದರು. ನಂತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ರಾಜ ರಾಮನ ಅಭಿಷೇಕ, ಈ ಸೌಭಾಗ್ಯ
ಶ್ರೀ ರಾಮ್ ಲಲ್ಲಾ ದರ್ಶನ, ರಾಜ ರಾಮನ ಪ್ರತಿಷ್ಠಾಪನೆಯ ಮಹತ್ತರ ಸೌಭಾಗ್ಯವು ರಾಮಜಿಯ ಕೃಪೆಯಿಂದ ದೊರೆತಿದೆ. ಭಗವಾನ್ ಶ್ರೀರಾಮನನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿದಾಗ ಶ್ರೀರಾಮನ ತತ್ವಾದರ್ಶಗಳು, ಮೌಲ್ಯಗಳು ದೃಢವಾಗಿ ನಿಂತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಘಳಿಗೆಯಲ್ಲಿ ಭಗವಾನ್ ರಾಮನಂತಹ ಇಚ್ಛಾಶಕ್ತಿಯು ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರೇರೆಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸಬ್ಕಾ ಸಾಥ್-ಸಬ್ಕಾ ವಿಕಾಸ್ ಪ್ರಯತ್ನದಲ್ಲಿ ಭಗವಾನ್ ಶ್ರೀರಾಮನ ಆಲೋಚನೆಗಳು, ಭಗವಂತ ಆಡಳಿತ ಮೌಲ್ಯಗಳು, ಉದ್ದೇಶ ಕ್ರೋಢಿಕರಣಗೊಂಡಿದೆ. ಸರ್ಕಾರದ ಯೋಜನೆಗಳಿಂದ ದೇಶ ಮಹತ್ವ ಹೆಜ್ಜೆ ಇಡುತ್ತಿದೆ ಎಂದರು.

ಶ್ರೀರಾಮನ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ದೇಶದಲ್ಲಿ ಭಗವಾನ್ ಶ್ರೀರಾಮನ ಅಸ್ತಿತ್ವದ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು ಎಂದು ಪ್ರಸ್ತಾಪಿಸಿದರು. ಅಂತಹ ಅನೇಕ ಪ್ರಸಂಗಗಳನ್ನು ಈ ನಾಡಿನಲ್ಲಿ ನಾವು ಎದುರಿಸಿದ್ದೇವೆ. ಇಂತಹ ಪ್ರಶ್ನೆ ಅನುಮಾನಗಳೇ ಭಾರತದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಏರಿಕೆ ಅಡ್ಡಿ ಉಂಟು ಮಾಡಿದವು. ಕೇಂದ್ರ ದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎಂಟು ವರ್ಷಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯವನ್ನು ನಿರಂತವಾಗಿ ಮಾಡಲಾಗುತ್ತಿದೆ. ಜೀವನದಲ್ಲಿ ತಮ್ಮ ಕರ್ತವ್ಯಕ್ಕಾಗಿ ಶ್ರಮಿಸಿದ್ದ ಶ್ರೀರಾಮನುನಂತೇ ದೇಶದಲ್ಲಿ ಸರ್ಕಾರವು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪ್ರಾಮಾನಿಕವಾಗಿ ಮಾಡುತ್ತಿದೆ. ದೇಶದ ಅಭಿವೃದ್ಧಿಗಾಗಿ ನಮ್ಮ ಕೆಲಸಗಳು ಮುಂದುವರಿಯುತ್ತವೆ ಎಂದು ಶ್ರೀರಾಮ ಹಾಗೂ ಸರ್ಕಾರದ ಸಾಧನೆ ಕುರಿತು ಹೇಳಿದರು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 1800 ಕೋಟಿ ರೂಪಾಯಿ ಖರ್ಚು!

ಮಂದಿರ ನಿರ್ಮಾಣದ ನಂತರ ಪ್ರವಾಸಿಗರ ಏರಿಕೆ
ಸದ್ಯ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಂತ ಹಂತವಾಗಿ ಹೆಚ್ಚಾಗಲಿದೆ. ಇಲ್ಲಿನ ಪ್ರವಾಸೋದ್ಯಮ ಬೆಳೆಯಲಿದೆ. ಅಯೋಧ್ಯೆ ನಿವಾಸಿಗಳು ಸನ್ನಡೆ ಉಳ್ಳವರಾಗಿದ್ದು, ಅಯೋಧ್ಯೆ ಮಂದಿರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕುರಿತು ಜನರೇ ನಿರ್ಧರಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ರಾಮನಂತೆ ಕರ್ತವ್ಯದ ಬಗ್ಗೆ ಸ್ಪಷ್ಟತೆ ಇದೆ
ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಬದುಕಿನುದ್ದಕ್ಕೂ ಭಗವಾನ್ ಶ್ರೀರಾಮ ಎಂದೂ ಕರ್ತವ್ಯದಿಂದ ವಿಮುಖರಾಗಲಿಲ್ಲ. ರಾಮನಿಗೆ ತನ್ನ ಹಕ್ಕು, ಕರ್ತವ್ಯಗಳ ಬಗ್ಗೆ ಸ್ಪಷ್ಟತೆ ಇತ್ತು. ಅದೇ ರೀತಿ ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯ ನೆರವೇರಿಸಬೇಕು. ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶ್ರೀರಾಮನ ತತ್ವಾದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡ ನಮಗೆ ಸದಾ ಕರ್ತವ್ಯದ ಬಗ್ಗೆ ಅರಿವಿರುತ್ತದೆ ಎಂದು ತಿಳಿಸಿದರು.

ಅಯೋಧ್ಯೆ ದೀಪೋತ್ಸವ ಗಿನ್ನಿಸ್ ದಾಖಲೆ ಆಗಲಿದೆ
ದೀಪಾವಳಿ ಪ್ರಯುಕ್ತ ಅಯೋಧ್ಯೆ ರಾಮಮಂದಿರದಲ್ಲಿ ಒಟ್ಟು 15ಲಕ್ಷಕ್ಕೂ ಅಧಿಕ ದೀಪಗಳನ್ನು ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೀಪಗಳ ಉತ್ಸವ ನೆರವೇರಿಸಲಾಗಿದೆ. ಇಂತಹ ಅದ್ಭತ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಾಕ್ಷಿಯಾದರು. ಈ ದೀಪೋತ್ಸವ ವೇಳೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಮಾಹಿತಿ ಪಡೆದುಕೊಂಡು ತೆರಳಿದ್ದಾರೆ. ದೀಪೋತ್ಸವ ಅಂಕಿ ಅಂಶಗಳನ್ನು ಅಧಿಕಾರಿಗಳು ನಿಖರವಾಗಿ ಪ್ರಕಟಿಸಿದ ಬಳಿಕ ಅಯೋಧ್ಯೆ ದೀಪೋತ್ಸವ ಬರೆದ ಗಿನ್ನಿಸ್ ದಾಖಲೆ ಬಗ್ಗೆ ದೇಶಕ್ಕೆ ತಿಳಿಯಲಿದೆ.