'ಇದು ಸ್ಫಟಿಕದಂತೆ ಸ್ಪಷ್ಟ':ರೈತರ ಮೇಲೆ ಕಾರು ಹರಿದ ಹೊಸ ವಿಡಿಯೋ ಮತ್ತೆ ಟ್ವೀಟ್ ಮಾಡಿದ ಬಿಜೆಪಿ ಸಂಸದ
ನವದೆಹಲಿ, ಅಕ್ಟೋಬರ್ 07: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಮತ್ತೆ ಒಂದು ಸ್ಪಷ್ಟವಾದ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಈ ಮುಗ್ಧ ರೈತರ ಸಾವಿಗೆ ಯಾರೂ ಹೊಣೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ವಾಹನವೊಂದು ರೈತರ ಮೇಲೆ ವೇಗವಾಗಿ ಹರಿದು ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, "ಈ ವಿಡಿಯೋವು ಸ್ಫಟಿಕದಂತೆ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆಯ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಮುಗ್ಧ ರೈತರ ರಕ್ತ ಚಿಮ್ಮಿದ್ದಕ್ಕೆ ಹೊಣೆಗಾರರು ಇರಲೇಬೇಕು. ಎಲ್ಲಾ ರೈತರ ಮನಸ್ಸಲ್ಲಿ ಆಕ್ರೋಶ ಹಾಗೂ ಕ್ರೂರತೆ ತೀವ್ರಗೊಳ್ಳುವ ಮುನ್ನವೇ ನ್ಯಾಯವನ್ನು ದೊರಕಿಸಬೇಕು," ಎಂದು ಹೇಳುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ರೈತರು ಆಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬಿಜೆಪಿ ಸಂಸದ ತನ್ನ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಮಂಗಳವಾರವೂ ಕೂಡಾ ಇದೇ ರೀತಿ ವಿಡಿಯೋವನ್ನು ವರುಣ್ ಗಾಂಧಿ ಹಂಚಿಕೊಂಡಿದ್ದರು.

"ಈ ವಿಡಿಯೋವು ಯಾರದೇ ಹೃದಯವನ್ನು ಕದಕುತ್ತದೆ," ಎಂದು ಹೇಳಿದ್ದರು. ಹಾಗೆಯೇ ಉತ್ತರ ಪ್ರದೇಶದ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡು ಶೀಘ್ರವೇ ಈ ಸಾವಿಗೆ ಕಾರಣೀಕರ್ತರನ್ನು ಬಂಧನ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
"ಉತ್ತರ ಪ್ರದೇಶದ ಲಖಿಂಪುರ ಖೇರಿಯ ವಿಡಿಯೋದಲ್ಲಿ ರೈತರ ಮೇಲೆ ವಾಹನವು ಹರಿದು ಹೋಗುವ ದೃಶ್ಯವು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಇದು ಯಾರದೇ ಆದರೂ ಹೃದಯವನ್ನು ಕದಕುವಂತಿದೆ. ಪೊಲೀಸರು ಈ ವಿಡಿಯೋವನ್ನು ಪರಿಶೀಲನೆ ನಡೆಸಬೇಕು ಹಾಗೂ ಈ ಕಾರಿನ ಮಾಲೀಕರನ್ನು ಪತ್ತೆ ಹಚ್ಚಬೇಕು. ಈ ಕಾರಿನಲ್ಲಿ ಕುಳಿತಿರುವವರನ್ನು ಕೂಡಾ ಪತ್ತೆ ಹಚ್ಚಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಕಂಡು ಹಿಡಿದು ಅವರನ್ನು ಕೂಡಲೇ ಬಂಧನ ಮಾಡಬೇಕು," ಎಂದು ಉತ್ತರ ಪ್ರದೇಶದ ಬಿಜೆಪಿಯ ಲೋಕ ಸಭಾ ಸಂಸದ ವರುಣ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಪರಿಸ್ಥಿತಿಯನ್ನು ತಪ್ಪಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಬುಧವಾರ ರಾಹುಲ್ ಗಾಂಧಿ, "ರೈತರ ಮೇಲೆ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥಿತ ದಾಳಿ ನಡೆಸುತ್ತಿದೆ," ಎಂದು ಆರೋಪ ಮಾಡಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಬಿಜೆಪಿ ತಿರುಗೇಟು ನೀಡಿದೆ. "ರಾಹುಲ್ ಗಾಂಧಿ ತಮ್ಮ ರಾಜಕೀಯಕ್ಕೆ ಲಖಿಂಪುರ ಘಟನೆಯನ್ನು ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ," ಎಂದು ದೂರಿದೆ.
"ಲಖಿಂಪುರ್ ಖೇರಿಯಲ್ಲಿ ನಡೆದದ್ದು ದುಃಖಕರ ಸಂಗತಿ. ಈ ಕುರಿತು ರೈತ ಸಂಘಟನೆಗಳು ಹಾಗೂ ಸರ್ಕಾರ ನಿಷ್ಪಕ್ಷಪಾತ ತನಿಖೆಗೆ ಒಪ್ಪಿಕೊಂಡಿ," ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. "ಲಖಿಂಪುರ ಖೇರಿ ಘಟನೆ ಕುರಿತು ರಾಹುಲ್ ಗಾಂಧಿ ಅಜಾಗರೂಕ ಹೇಳಿಕೆಗಳನ್ನು ನೀಡಿದ್ದಾರೆ. ಇದು ಇಂಥ ಹೇಳಿಕೆಗಳನ್ನು ನೀಡುವ ಸಮಯವಲ್ಲ. ಆದರೆ ಅವರು ಈ ಕೆಲಸವನ್ನು ಮಾಡಿದ್ದಾರೆ. ಬೇಜವಾಬ್ದಾರಿತನ ಎಂಬುದು ರಾಹುಲ್ ಗಾಂಧಿ ಎರಡನೇ ಹೆಸರಾಗಿದೆ," ಎಂದು ಅವರು ಟೀಕಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications