Kunigal Elections: ಕುಣಿಗಲ್‌ನಲ್ಲಿ ಬಾಡೂಟ, ಬಾಗಿನ, ಡಿನ್ನರ್ ಸೆಟ್ ಜಟಾಪಟಿ!
ತುಮಕೂರು, ಮಾರ್ಚ್ 24: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದಂತೆ ಟಿಕೆಟ್ ಹಂಚಿಕೆ ಬಗ್ಗೆ ಪಕ್ಷಗಳ ನಾಯಕರು ಅಂತಿಮ ಪಟ್ಟಿ ಸಿದ್ಧಗೊಳಿಸುತ್ತಿದ್ದಾರೆ. ಆದರೆ, ತುಮಕೂರು ಮತ್ತು ಬೆಂಗಳೂರು ಎರಡು ಜಿಲ್ಲೆಗಳಿಗೆ ಆಪ್ತವಾಗಿರುವ ಕುಣಿಗಲ್‌ನಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡುತ್ತಿರುವುದು ಬಾಡೂಟ, ಬಾಗಿನ, ಡಿನ್ನರ್ ಸೆಟ್.
ಹೌದು, ಕುಣಿಗಲ್‌ನಲ್ಲಿ ಗೆಲುವು ದಾಖಲಿಸುವ ಹಂಬಲದಲ್ಲಿರು ಕಾಂಗ್ರೆಸ್‌ನ ಹಾಲಿ ಶಾಸಕ ಎಚ್.ಡಿ. ರಂಗನಾಥ್ ಡಿನ್ನರ್ ಸೆಟ್‌ಗಳು, ಸೀರೆಗಳನ್ನು ಹಂಚಲು ಆರಂಭಿಸಿದ್ದಾರೆ. ಇತ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ರಾಜೇಶ್‌ಗೌಡ ಕೂಡ ಕ್ಷೇತ್ರದ ಜನರನ್ನು ತನ್ನತ್ತ ಸೆಳೆಯಲು ಮತದಾರರಿಗೆ ಬಾಡೂಟ, ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

*ಕುಣಿಗಲ್ ಕ್ಷೇತ್ರ ಪರಿಚಯ*
ರಾಜ್ಯದ ಕಲ್ಪತರು ಜಿಲ್ಲೆ ತುಮಕೂರಿನ ಒಂದು ತಾಲೂಕು ಕೇಂದ್ರ ಕಚೇರಿ ಕುಣಿಗಲ್. ಕುಣಿಗಲ್ ನ ಇನ್ನೊಂದು ಹೆಸರು ನರ್ತನಪುರಿ. ಯುದ್ಧದ ಕುದುರೆಗಳಿಗೆ ತರಬೇತಿ ನೀಡಲು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸ್ಥಾಪಿಸಿದ ಸ್ಟಡ್ ಫಾರ್ಮ್‌ಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ. ಟಿಪ್ಪು ನಂತರ ಈ ಸ್ಟಡ್ ಫಾರ್ಮ್ ಅನ್ನು ಮೈಸೂರು ಒಡೆಯರ್ ನಿರ್ವಹಿಸುತ್ತಿದ್ದರು. ಬಳಿಕ ಇದನ್ನು ರೇಸ್ ಕುದುರೆಗಳ ಸಾಕಣೆಗಾಗಿ ವಿಜಯಮಲ್ಯ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಕುಣಿಗಲ್ ಕೆರೆ ಕರ್ನಾಟಕದ ಎರಡನೇ ದೊಡ್ಡ ಕೆರೆ. 2011 ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 34, 155 ಜನಸಂಖ್ಯೆ ಇದೆ.
*ಭೌಗೋಳಿಕತೆ ಮತ್ತು ಪ್ರವಾಸಿ ಸ್ಥಳಗಳು*
ಕುಣಿಗಲ್, ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48 (NH-48) ಮತ್ತು ತುಮಕೂರು ಮತ್ತು ಮದ್ದೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ 33 ನಲ್ಲಿದೆ. ಕುಣಿಗಲ್ ಬೆಂಗಳೂರಿನಿಂದ ಪಶ್ಚಿಮಕ್ಕೆ 70 ಕಿಲೋಮೀಟರ್ ಮತ್ತು ಮೈಸೂರಿನಿಂದ ಉತ್ತರಕ್ಕೆ 115 ಕಿಲೋಮೀಟರ್ ದೂರದಲ್ಲಿದೆ. ಇತ್ತೀಚೆಗೆ ತೆರೆಯಲಾದ ಹಾಸನ-ಬೆಂಗಳೂರು ರೈಲು ಮಾರ್ಗವು ಕುಣಿಗಲ್ ಮೂಲಕ ಹಾದುಹೋಗುತ್ತದೆ.
ಶಿವಗಂಗೆಯಲ್ಲಿ ಹುಟ್ಟುವ ಮೂರು ನದಿಗಳಾದ ನಳಿನಿ, ನಾಗಿನಿ ಮತ್ತು ಕಮಲ ಕುಣಿಗಲ್‌ನಲ್ಲಿ ಒಂದಾಗುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿರುವ ನರಸಿಂಹ ದೇವಾಲಯವು ಹೊಯ್ಸಳರ ಕಾಲದ ದೊಡ್ಡ ಕಲಾಕೃತಿಯಾಗಿದ್ದು, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ. ಕುಣಿಗಲ್ ನಗರದಿಂದ 5 ಕಿಮೀ ದೂರದಲ್ಲಿರುವ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯವು (ಅಂದಾಜು 1400 ಹೆಕ್ಟೇರ್) ಅರಣ್ಯದಿಂದ ಸುತ್ತುವರೆದಿದೆ.

*ಕುಣಿಗಲ್ ರಾಜಕೀಯ ಇತಿಹಾಸ*
ಕುಣಿಗಲ್ ರಾಜಕೀಯ ಇತಿಹಾಸ 1957ರಿಂದ ಆರಂಬವಾಗುತ್ತದೆ. 1957ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟಿ.ಎನ್. ಮುದ್ಲಗಿರಿಗೌಡ ಇಲ್ಲಿಂದ ಆಯ್ಕೆಯಾಗಿದ್ದರು. ಇದಾದ ಬಳಿಕ 1962ರಲ್ಲಿ ಸ್ವತಂತ್ರ ಅಭ್ಯರ್ಥಿ ಅಂದಾನಯ್ಯ, 1967ರಲ್ಲಿ ಕಾಂಗ್ರೆಸ್‌ನ ಜಿ.ತಮ್ಮಣ್ಣ ಶಾಸಕರಾದರು. ಇದಾದ ಬಳಿಕ ಸ್ವತಂತ್ರ್ಯ ಅಭ್ಯರ್ಥಿ ಅಂದಾನಯ್ಯ ಕಾಂಗ್ರೆಸ್ ಸೇರ್ಪಡೆಯಾದರು.
1972 ಮತ್ತು 1978ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಂದಾನಯ್ಯ ಎರಡು ಬಾರಿಯು ಜಯಗಳಿಸಿದ್ದರು. ಅಲ್ಲಿಯವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕುಣಿಗಲ್‌ಗೆ 1983 ರಲ್ಲಿ ಬಿಜೆಪಿ ನುಸುಳಿತ್ತು. 1983 ಮತ್ತು 1989 ರಲ್ಲಿ ಬಿಜೆಪಿಯ ವೈ. ಕೆ. ರಾಮಯ್ಯ ಗೆಲುವು ಸಾಧಿಸಿದರು. ಮತ್ತೆ 1989ರಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. 1989ರಲ್ಲಿ ಕೆ. ಲಕ್ಕಪ್ಪ, 1994 ಮತ್ತು 1999ರಲ್ಲಿ ಎಸ್.ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜಯ ಗಳಿಸಿದ್ದರು.
2004ರಲ್ಲಿ ಮೊದಲ ಬಾರಿಗೆ ನಿಂಗಪ್ಪ ಎಚ್ ಗೆಲ್ಲುವ ಮೂಲಕ ಕುಣಿಗಲ್‌ನಲ್ಲಿ ಜಾತ್ಯತೀತ ಜನತಾ ದಳ ತನ್ನ ಖಾತೆ ತೆರೆಯಿತು. ಬಳಿಕ 2008ರಲ್ಲಿ ಬಿ.ಬಿ. ರಾಮಸ್ವಾಮಿಗೌಡ ಗೆಲ್ಲುವ ಮೂಲಕ ಮತ್ತೆ ಕುಣಿಗಲ್ ಕಾಂಗ್ರೆಸ್ ಪಾಲಾಯಿತು. 2013 ಇದು ಮತ್ತೆ ಜೆಡಿಎಸ್ ಪಾಲಾಯಿತು. ಡಿ.ನಾಗರಾಜಯ್ಯ ಆಯ್ಕೆಯಾದರು, 2018ರ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಕುಟುಂಬದ ಡಾ. ಎಚ್.ಡಿ. ರಂಗನಾಥ್ ಕಾಂಗ್ರೆಸ್‌ನಿಂದ ಶಾಸಕರಾಗಿದ್ದಾರೆ.

ಡಾ. ಎಚ್.ಡಿ. ರಂಗನಾಥ್ 2018ರ ಚುನಾವಣೆಯಲ್ಲಿ 58,697 ಮತಗಳನ್ನು ಪಡೆದು, 53,097 ಮತಗಳನ್ನು ಪಡೆದಿದ್ದ ಬಿಜೆಪಿ ಯ ಡಿ.ಕೃಷ್ಣಕುಮಾರ್ ಮತ್ತು 44,476 ಮತಗಳನ್ನು ಪಡೆದಿದ್ದ ಡಿ.ನಾಗರಾಜ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇಲ್ಲಿ ಮತ ಅಂತರ 5,600. ಈ ಬಾರಿಯೂ ಕಾಂಗ್ರೆಸ್‌ನಿಂದ ಡಾ. ಎಚ್.ಡಿ. ರಂಗನಾಥ್, ಜೆಡಿಎಸ್‌ನಿಂದ ಡಿ.ನಾಗರಾಜ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡೇ ಇದೆ.
*ಕುಣಿಗಲ್‌ನಲ್ಲಿ ಕಾಂಗ್ರೆಸ್ ಸ್ಥಿತಿಗತಿ*
ಕಾಂಗ್ರೆಸ್‌ನಲ್ಲಿ ಈಗಾಗಲೇ ಹಾಲಿ ಶಾಸಕ ಡಾ. ಎಚ್.ಡಿ. ರಂಗನಾಥ್ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್. ಇವರು, ಡಿಕೆಶಿ ನಾದಿನಿಯ ಪತಿ. ವೃತ್ತಿಯಲ್ಲಿ ಇವರು ವೈದರಾಗಿರುವ ಇವರನ್ನು 2018ರ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಮುತುವರ್ಜಿ ವಹಿಸಿ ಗೆಲ್ಲುವಂತೆ ಮಾಡಿದ್ದರು. ಈ ಬಾರಿಯೂ ಡಿಕೆ ಶಿವಕುಮಾರ್ ಕುಣಿಗಲ್‌ನಲ್ಲಿ ಮತಬೇಟೆ ಆರಂಭಿಸಿ ಗಮನ ಸೆಳೆದಿದ್ದಾರೆ. ಹೀಗಾಗಿಯೇ ಶಾಸಕರಾಗಿ ಆಯ್ಕೆಯಾಗಿದ್ದ ರಂಗನಾಥ್, ಪ್ರಮಾಣವಚನವನ್ನು ಡಿ ಕೆ ಶಿವಕುಮಾರ್ ಹೆಸರಿನಲ್ಲಿ ತೆಗೆದುಕೊಂಡು ಸುದ್ದಿಯಾಗಿದ್ದರು.
*ಕುಣಿಗಲ್‌ನಲ್ಲಿ ಬಿಜೆಪಿ ಸ್ಥಿತಿಗತಿ*
ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿ ಮುಖಂಡ ಎಚ್.ಡಿ.ರಾಜೇಶ್‌ಗೌಡ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸಂತೇಪೇಟೆಯಲ್ಲಿ ಸ್ತ್ರೀ ಶಕ್ತಿ ಸಮಾವೇಶ ನಡೆಸಿದ್ದಾರೆ. ಭಾಗಿಯಾಗಿದ್ದ ಎಲ್ಲರಿಗೂ ಬಾಡೂಟ ಮತ್ತು ಬಾಗಿನ ವ್ಯವಸ್ತೆ ಮಾಡಿದ್ದರು. ಸದ್ಯ ಕುಣಿಗಲ್ ಕ್ಷೇತ್ರದಲ್ಲಿ ಮೂವರ ನಡುವೆ ಟಿಕೆಟ್ ಫೈಟ್ ಜೋರಾಗಿದೆ.
ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್‌ಗೌಡ, ಡಿ. ಕೃಷ್ಣಕುಮಾರ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮೂವರು ಟಿಕೆಟ್ ಆಕಾಂಕ್ಷಿಗಳು ಹಲವು ರೀತಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಮುಖಂಡ ಡಿ. ಕೃಷ್ಣಕುಮಾರ್ ಜನ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ.
2008ರಿಂದ 2018ರ ವರೆಗೆ ಮೂರು ಚುನಾವಣೆಯಲ್ಲಿ ಅಣ್ಣ ಡಿ.ನಾಗರಾಜಯ್ಯ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ತಮ್ಮ ಡಿ.ಕೃಷ್ಣಕುಮಾರ್ ಬಿಜೆಪಿಯಿಂದ ಸ್ಪರ್ಧೆ ನೀಡುತ್ತಾ ಬಂದಿದ್ದು, ಎರಡು ಚುನಾವಣೆಯಲ್ಲಿ ಇಬ್ಬರೂ ಸೋಲು ಕಂಡಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೃಷ್ಣಕುಮಾರ್, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ನಾಗರಾಜಯ್ಯ ಇಬ್ಬರೂ ಸೋತಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಇಬ್ಬರ ಜಗಳ ಕಾಂಗ್ರೆಸ್‌ಗೆ ಹೆಚ್ಚು ಲಾಭದಾಯಕವಾಗಿದೆ.
*ಕುಣಿಗಲ್‌ನಲ್ಲಿ ಜೆಡಿಎಸ್ ಸ್ಥಿತಿಗತಿ*
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 2004ರಲ್ಲಿ ಮೊದಲ ಬಾರಿಗೆ ನಿಂಗಪ್ಪ ಎಚ್ ಗೆಲ್ಲುವ ಮೂಲಕ ಕುಣಿಗಲ್‌ನಲ್ಲಿ ಜಾತ್ಯತೀತ ಜನತಾ ದಳ ತನ್ನ ಖಾತೆ ತೆರೆಯಿತು. ಇಲ್ಲಿ ಅಣ್ಣ ಡಿ. ನಾಗರಾಜಯ್ಯ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ತಮ್ಮ ಡಿ.ಕೃಷ್ಣಕುಮಾರ್ ಬಿಜೆಪಿಯಿಂದ ಸ್ಪರ್ಧೆ ನೀಡುತ್ತಾ ಬಂದಿದ್ದು ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಲಾಭ ಪಡೆದುಕೊಳ್ಳುತ್ತಿದೆ. 2008ರಲ್ಲಿ ಅಣ್ಣ ತಮ್ಮ ಇಬ್ಬರು ಸೋತು ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2013 ಡಿ.ನಾಗರಾಜಯ್ಯ ಗೆಲುವು ಸಾಧಿಸಿದ್ದಾರೆ. ಈ ಬಾರಿ ಜೆಡಿಎಸ್ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರಿಗೆ ಟಿಕೆಟ್ ನೀಡಿದೆ.
*ಮತದಾರರು*
ಕುಣಿಗಲ್ ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾನಿರತ ಮತದಾರರು ಸೇರಿ ಒಟ್ಟು 1,88,580 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 95,585 ಪುರುಷರು, 92,915 ಮಹಿಳೆಯರು ಮತ್ತು 18 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಸೇರಿದ್ದಾರ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 97.15 ಮತ್ತು ಅಂದಾಜು ಸಾಕ್ಷರತೆ ಪ್ರಮಾಣ 69% ಇದೆ.












Click it and Unblock the Notifications