Krishnarajanagara Elections: ಕೃಷ್ಣರಾಜನಗರದ ವಿಜಯ ಮಾಲೆ ಯಾರ ಕೊರಳಿಗೆ?
ಮೈಸೂರು, ಮಾರ್ಚ್ 27: 'ಭತ್ತದ ಕಣಜ' ಎಂದೇ ಖ್ಯಾತಿ ಪಡೆದಿರುವ ಕೃಷ್ಣರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿಯೇ ಇದೆ. ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಠಕ್ಕರ್ ಕೊಡಲು ಬಿಜೆಪಿ ಕೂಡ ಟೊಂಕ ಕಟ್ಟಿ ನಿಂತಿದೆ. ಆಕಾಂಕ್ಷಿಗಳು, ಮತದಾರರ ಮನಸ್ಸು ಗೆಲ್ಲುವುದಕ್ಕಾಗಿ ನಾನಾ ತಂತ್ರಗಳಲ್ಲಿ ತೊಡಗಿದ್ದಾರೆ.
ಮೈಸೂರು ಹೊರತುಪಡಿಸಿ, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರ ಕ್ಷೇತ್ರದಲ್ಲಿಯೂ ಹಿಂದುಳಿದ ಮತಗಳದ್ದೇ ಹೆಚ್ಚಿನ ಪ್ರಾಬಲ್ಯ. ಒಕ್ಕಲಿಗ, ಕುರುಬರು ಪ್ರಬಲವಾಗಿರುವ ಇಲ್ಲಿ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲುವು ಸಾಧಿಸಿದೆ.

ಜೆಡಿಎಸ್‌ನಿಂದ ಶಾಸಕ ಸಾ.ರಾ. ಮಹೇಶ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ, ಆದರೆ ಕಾಂಗ್ರೆಸ್‌ನಿಂದ ತಾಲೂಕಿನ ಪ್ರಭಾವಿ ಮುಖಂಡ ದೊಡ್ಡಸ್ವಾಮಿಗೌಡರ ಮಗ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಮಾಜಿ ನಾಯಕ ಡಿ.ರವಿಶಂಕರ್ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಗೆದ್ದು ವಿಧಾನಸಭೆ ಪ್ರವೇಶಿಸಬೇಕು ಎಂಬ ಪಣ ತೊಟ್ಟಿರುವ ಡಿ.ರವಿಶಂಕರ್ ಈ ನಿಟ್ಟಿನಲ್ಲಿ ಈಗಾಗಲೇ ಮನೆ ಮನೆ ಯಾತ್ರೆ ಕೈಗೊಂಡಿದ್ದಾರೆ. ಅನುಕಂಪದ ಅಲೆ ಈ ಬಾರಿಯಾದರೂ ಅವರನ್ನು ಕೈ ಹಿಡಿಯುತ್ತದೆಯೇ ? ಕಾದು ನೋಡಬೇಕಬೇಕಿದೆ.
ಕೃಷ್ಣರಾಜನಗರ ಕ್ಷೇತ್ರದ ಪ್ರಸ್ತುತ ರಾಜಕರಣ
ಕಾಂಗ್ರೆಸ್‌ನಿಂದ ಐಶ್ವರ್ಯ ಮಹದೇವ್ ಕೂಡ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದರು. ಇವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಂಚನಹಳ್ಳಿ ಮಹದೇವು ಅವರ ಮಗಳು. ಆದರೆ, ಹೈಕಮಾಂಡ್ ರವಿಶಂಕರ್ ಅವರಿಗೆ ಮಣೆ ಹಾಕಿದೆ.

ಇನ್ನು ಜೆಡಿಎಸ್‌ನಿಂದ ಸಾರಾ ಮಹೇಶ್ ನಾಲ್ಕನೇ ಬಾರಿ ಶಾಸಕರಾಗಲು ಹೆಜ್ಜೆ ಇಟ್ಟಿದ್ದಾರೆ. ಸಾ.ರಾ.ಮಹೇಶ್ ಅಲ್ಲಿ 2008ರಿಂದ ಶಾಸಕರಾಗಿದ್ದಾರೆ. ಬಿಜೆಪಿಯಿಂದ ಹೊಸಳ್ಳಿ ವೆಂಕಟೇಶ್ ಮಿರ್ಲೆ ಶ್ರೀನಿವಾಸಗೌಡ, ವರದರಾಜು ಪೈಪೋಟಿಯಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಗೊಂಡಿದ್ದುಘ, ಊರೂರು ತಿರುಗಿ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಸಮಾಜದವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ, ರಾಜಕೀಯ ಪಕ್ಷಗಳ ಆದ್ಯತೆ ಈ ಸಮುದಾಯದವರ ಮನವೊಲಿಕೆಯತ್ತಲೇ ಇದೆ.
ಬಿಜೆಪಿಯಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆ. ಒಕ್ಕಲಿಗರು ಹಾಗೂ ಕುರುಬ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದರೆ ಪ್ರಯೋಜನ ಹೆಚ್ಚು ಎಂಬ ಅನಿಸಿಕೆ ಬಿಜೆಪಿ ಸುತ್ತ ಗಿರಕಿ ಹೊಡೆಯುತ್ತಿದೆ. ಮೊದಲ ಬಾರಿಗೆ ಕೆ.ಆರ್.ನಗರದಲ್ಲಿ ಕಮಲ ಅರಳಿಸುವ ಇರಾದೆ ಪಕ್ಷದ ನಾನಾ ಮುಖಂಡರಿಗೆ ಇದೆ.
ಶ್ವೇತಾ ಗೋಪಾಲ್, ಪಕ್ಷದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಕೆ.ವೈ.ಮಂಜು, ಮೇಲೂರು ಮಂಜು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸ್ವರಾಜ್ ಇಂಡಿಯಾ ಪಕ್ಷದಿಂದ ಗರುಡಗಂಬ ಸ್ವಾಮಿ ಹಾಗೂ ಸಿಂಹ ಶಿವುಗೌಡ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. 2018ರ ಚುನಾವಣೆಯಲ್ಲಿ ಶ್ವೇತಾ ಗೋಪಾಲ್ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಕಳೆದ ಬಾರಿ ಚುನಾವಣೆಯಲ್ಲಿ 1700 ಮತಗಳ ಅಂತರದಿಂದ ಸೋತಿದ್ದರು. ಸಾರಾ ಮಹೇಶ್ ಅತ್ಯಾಲ್ಪ ಮತಗಳ ಜಯ ಸಾಧಿಸಿದ್ದರು. ಹಾಗಾಗಿ ಈ ಬಾರಿ ರವಿಶಂಕರ್ ಮೇಲೆ ಅನುಕಂಪದ ಅಲೆ ಕೆಲಸ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತದೆ.ಈ ನಡುವೆ, ಡಿ.ರವಿಶಂಕರ್ ಈಗಾಗಲೇ 'ಜನಾಶೀರ್ವಾದ ಯಾತ್ರೆ' ಆರಂಭಿಸಿದ್ದಾರೆ. ತಾಲೂಕಿನ ಪ್ರತಿ ಮನೆಗೆ ಹೋಗಿ ಮತ ಕೇಳುತ್ತಿದ್ದಾರೆ. ಒಟ್ಟಾರೆ ಕೆ.ಆರ್.ನಗರ ವಿಧಾನಸಭೆ ಕ್ಷೇತ್ರ ರಂಗುಪಡೆದಿದೆ.
ಕೆ.ಆರ್.ನಗರ ವಿಧಾನಸಭಾ ಚುನಾವಣಾ 2018ರ ಫಲಿತಾಂಶ
2018 ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸಾ.ರಾ ಮಹೇಶ್ ಸ್ಪರ್ಧಿಸಿದ್ದು, 85,011 ಮತಗಳನ್ನು ಪಡೆದಿದ್ದರು. ಇನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಡಿ.ರವಿಶಂಕರ್ 83,232 ಮತಗಳನ್ನು ಪಡೆದು 1,779 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
ಕೆ.ಆರ್.ನಗರ ಕ್ಷೇತ್ರದ ಮತದಾರರ ವಿವರ
ತಾಲೂಕಿನಲ್ಲಿ ಅಂದಾಜು ಸುಮಾರು 2,07,776 ಮತದಾರರಿದ್ದಾರೆ. ಅದರಲ್ಲಿ ಒಕ್ಕಲಿಗರು 58,000, ಕುರುಬರು 52,000, ಪರಿಶಿಷ್ಟ ಜಾತಿ 20,000 ಹಾಗೂ ಪರಿಶಿಷ್ಟ ಪಂಗಡ 15,000 ಲಿಂಗಾಯತರು 15,000, ಮುಸ್ಲಿಂ 12,000 ಹಾಗೂ ಇತರೆ 35776 ಮತಗಳಿವೆ.












Click it and Unblock the Notifications