ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ; ಪದವಿ ನೀಡಲು ಒಪ್ಪಿಗೆ
ಕೊಪ್ಪಳ, ಜುಲೈ 27; ಯುಜಿಸಿ ಪದವಿಗಳನ್ನು ನೀಡಲು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಅಧಿಕೃತ ಮಾನ್ಯತೆ ದೊರೆತಿದೆ. 2022-23ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಕೊಪ್ಪಳದಲ್ಲಿ ನೂತನವಾಗಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿತ್ತು.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತನ್ನ ಅಧಿನಿಯಮ 1956ರ ಪ್ರಕರಣ 2 (ಎಫ್) ಅಡಿಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ಜುಲೈ 21ರಂದು ನೀಡಿದೆ. ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಲಾಗಿದೆ.

ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಕೊಪ್ಪಳ ವಿಶ್ವವಿದ್ಯಾಲಯವು ಯುಜಿಸಿ ಅಡಿಯಲ್ಲಿ ಬರುವ ಎಲ್ಲಾ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆಯನ್ನು ಪಡೆದಿದೆ. ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರು (ಪ್ರಭಾರ) ಈ ಕುರಿತು ಮಾಹಿತಿ ನೀಡಿದ್ದಾರೆ.
ಕೊಪ್ಪಳ ವಿವಿ ಸ್ಥಾಪನೆ; ರಾಯಚೂರಿನಿಂದ ಪ್ರತ್ಯೇಕವಾದ ಬಳಿಕ ಶೈಕ್ಷಣಿವಾಗಿ ಕೊಪ್ಪಳದಲ್ಲಿ ಹಲವು ಶಾಲೆ, ಕಾಲೇಜುಗಳು ಆರಂಭವಾಗಿವೆ. ವಿಜಯನಗರ, ಬಳ್ಳಾರಿ, ಗದಗ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲವಿದೆ. ಕೊಪ್ಫಳಕ್ಕೂ ವಿಶ್ವವಿದ್ಯಾಲಯ ಬೇಕು ಎಂಬ ಬೇಡಿಕೆ ಇತ್ತು.
ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಪ್ಪಳದಲ್ಲಿ ನೂತನವಾಗಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿತ್ತು. ಪ್ರಥಮ ಕುಲಪತಿಗಳಾಗಿ ಪ್ರೊ. ಬಿ. ಕೆ. ರವಿ 2023ರ ಮಾರ್ಚ್ 20ರಂದು ಹಾಗೂ ಪ್ರೊ. ಕೆ. ವಿ. ಪ್ರಸಾದ್ ಮಾರ್ಚ್ 29ರಂದು ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರ ವಹಿಸಿಕೊಂಡಿದ್ದರು.
ಜೂನ್ 2ರಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನವನ್ನು ಅನಾವರಣಗೊಳಿಸಿದ್ದರು. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ 7 ನೂತನ ವಿವಿ ಆರಂಭಿಸಿತ್ತು. ಅದರಲ್ಲಿ ಕೊಪ್ಪಳ ಸಹ ಒಂದು.
ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ನಡೆಯುತ್ತಿದೆ. ಕೊಪ್ಪಳ ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿಯೇ ವಿಶ್ವವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೂ ಇದೆ.
ಕೊಪ್ಪಳದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೂ ಮೊದಲು ವಿದ್ಯಾರ್ಥಿಗಳು ಕಲಬುರಗಿ ವಿಶ್ವವಿದ್ಯಾಲಯ ಅಥವ ಧಾರವಾಡ ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಆದ್ದರಿಂದ ಸ್ಥಳೀಯರು ಕೊಪ್ಪಳಕ್ಕೆ ವಿಶ್ವವಿದ್ಯಾಲಯ ಬೇಕು ಎಂದು ಹೋರಾಟ ನಡೆಸಿದ್ದರು. ಅಂತಿಮವಾಗಿ ವಿಶ್ವವಿದ್ಯಾಲಯ ನಿರ್ಮಾಣಗೊಂಡಿತ್ತು.
ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಕೊಪ್ಪಳದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಬಳಿಕ ಇದನ್ನು ಪರಿಶೀಲನೆ ಮಾಡಲು ನಾಲ್ವರು ಸದಸ್ಯರ ತಜ್ಞರ ಸಮಿತಿ ರಚನೆ ಮಾಡಿತ್ತು.
ಕೊಪ್ಪಳದಲ್ಲಿ 565 (1 ರಿಂದ 5) ಕಿರಿಯ ಪ್ರಾಥಮಿಕ ಪಾಠ ಶಾಲೆ, 854 (6 ರಿಂದ 8) ಹಿರಿಯ ಪ್ರಾಥಮಿಕ ಪಾಠ ಶಾಲೆ, 300 ಪ್ರೌಢಶಾಲೆಗಳು, 106 ಪದವಿ ಪೂರ್ವ ಕಾಲೇಜುಗಳು, 15 ಪದವಿ ಕಾಲೇಜುಗಳಿವೆ.
ಆಯುಷ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಎರಡು ಖಾಸಗಿ ಆಯುಷ್ ಕಾಲೇಜುಗಳಿದ್ದು 450ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಒಂದು ಇದ್ದು 580 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯು ರಚನೆಗೊಂಡು 25 ವರ್ಷ ಪೂರ್ಣಗೊಳಿಸಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ನೂತನ ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಯಾಗಿ ಡಾ. ಬಿ. ಕೆ. ರವಿ ನೇಮಕಗೊಂಡಿದ್ದರು.












Click it and Unblock the Notifications