ಆಪಲ್ ಪೋನ್ ಬದಲು ಸಾಬೂನು ಕೊಟ್ಟ ಇ-ಕಾಮರ್ಸ್ ಸಂಸ್ಥೆಗೆ ಗ್ರಾಹಕ ನ್ಯಾಯಾಲಯದಿಂದ ಭಾರೀ ದಂಡ
ಕೊಪ್ಪಳ, ಮಾರ್ಚ್. 23: ಆಪಲ್ ಐಫೋನ್ ಬುಕ್ ಮಾಡಿದ್ದ ವಿದ್ಯಾರ್ಥಿಯೊಬ್ಬರಿಗೆ ಫೋನ್ ಬದಲು ಬಟ್ಟೆ ತೊಳೆಯುವ ಸಾಬೂನು ಕಳುಹಿಸಿದೆ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್. ಇದನ್ನು ಗ್ರಾಹಕರ ನ್ಯಾಯಲಯದಲ್ಲಿ ಪ್ರಶ್ನಿಸಿದ್ದ ಯುವಕನ ಪರವಾಗಿ ತೀರ್ಪು ಬಂದಿದ್ದು, ಪರಿಹಾರ ನೀಡುವಂತೆ ಫ್ಲಿಪ್‌ಕಾರ್ಟ್‌ಗೆ ನ್ಯಾಯಾಲಯ ಆದೇಶಿಸಿದೆ.
ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಹರ್ಷ 2021 ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iಆಪಲ್ ಐಫೋನ್ 11 ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರು ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ನಿರ್ಮಾ ಡಿಟರ್ಜೆಂಟ್ ಸೋಪ್ ಕಳುಹಿಸಲಾಗಿತ್ತು. ಹರ್ಷ ಅವರು ಟೋಲ್-ಫ್ರೀ ಸಂಖ್ಯೆಯನ್ನು ಸಂಪರ್ಕಿಸಿದ್ದರು.

ಸಮಸ್ಯೆ ಆಲಿಸಿದ್ದ ಫ್ಲಿಪ್‌ಕಾರ್ಟ್ ಪ್ರತಿನಿಧಿಗಳು ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಆದರೆ ಮುಂದೆ ಏನೂ ಮಾಡಲಿಲ್ಲ. ಕೊನೆಗೆ ಬೇಸತ್ತ ಹರ್ಷ ಅವರು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ, ಅವರು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರನೇ ವ್ಯಕ್ತಿಯ ಮಾರಾಟಗಾರ ಸೇನ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.
ಸದ್ಯ ತೀರ್ಪು ನೀಡಿರುವ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಮತ್ತು ಅದರ ಚಿಲ್ಲರೆ ಮಾರಾಟಗಾರರಿಗೆ ಸೇವೆಯಲ್ಲಿನ ಕೊರತೆಗೆ ಪರಿಹಾರವಾಗಿ 25,000 ರೂಪಾಯಿ ಪಾವತಿಸಲು ಆದೇಶಿಸಿದೆ. ಅನ್ಯಾಯದ ವ್ಯಾಪಾರ ಅಭ್ಯಾಸ, ಗ್ರಾಹಕನಿಗೆ ಮಾನಸಿಕ ಸಂಕಟ ಮತ್ತು ದೈಹಿಕ ಕಿರುಕುಳವನ್ನು ಉಂಟುಮಾಡಿದ ಕಾರಣ ಪರಿಹಾರ ನೀಡಬೇಕು ಎಂದಿದೆ.

ನ್ಯಾಯಾಲಯವು ಮೊಬೈಲ್ ಫೋನ್ ವೆಚ್ಚ 48,999 ರೂಪಾಯಿಯ ( ಹರ್ಷ ಪೋನ್ ಆರ್ಡರ್ ಮಾಡಿದಾಗ ಇದ್ದ ಬೆಲೆ) ಮರುಪಾವತಿಗೆ ಆದೇಶ ನೀಡಿದೆ. ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಕ್ಕಾಗಿ 10,000 ರೂಪಾಯಿ ಮತ್ತು ಮಾನಸಿಕ ಸಂಕಟ ಮತ್ತು ದಾವೆ ವೆಚ್ಚಕ್ಕಾಗಿ ರೂ 15,000 ರೂಪಾಯಿಗಳನ್ನು ಎಂಟು ವಾರಗಳಲ್ಲಿ ಗ್ರಾಹಕರಿಗೆ ನೀಡುವಂತೆ ತಿಳಿಸಿದೆ.
ಫ್ಲಿಪ್‌ಕಾರ್ಟ್ ವಹಿವಾಟುಗಳನ್ನು ಸುಗಮಗೊಳಿಸಲು ಉತ್ಪನ್ನಗಳ ಮಾರಾಟಗಾರರು ಮತ್ತು ಖರೀದಿದಾರರ ನಡುವಿನ ಆನ್‌ಲೈನ್ ಮಾರುಕಟ್ಟೆ/ಪ್ಲಾಟ್‌ಫಾರ್ಮ್ ಮಾತ್ರ ಎಂದು ವಾದಿಸಿದರೂ, ನ್ಯಾಯಾಲಯವು ವಾದವನ್ನು ಪರಿಗಣಿಸಿಲ್ಲ. "ಯಾವುದೇ ಲಾಭವಿಲ್ಲದೇ ತನ್ನ ಗ್ರಾಹಕರಿಗೆ ಸಂಪೂರ್ಣವಾಗಿ ಸೇವೆಯನ್ನು ಒದಗಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಯಿಂದ ಅಂತಹ ನಡವಳಿಕೆ ಮತ್ತು ಮನೋಭಾವವನ್ನು ನಿರೀಕ್ಷಿಸಿಲ್ಲ" ಎಂದು ಹೇಳಿದೆ.

"ಬೇರೆ ರೀತಿಯಲ್ಲಿ ಹೇಳುವುದಾದರೆ, ಕಂಪನಿಯ ಈ ಕೆಲಸ ಮತ್ತು ನಡವಳಿಕೆಯು ಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಸೇವೆಯಲ್ಲಿನ ಕೊರತೆಯ ಅಡಿಯಲ್ಲಿ ಬರುತ್ತದೆ. ಏಕೆಂದರೆ ಅದು ಉತ್ಪನ್ನದ ಪೂರ್ಣ ಮೊತ್ತವನ್ನು ತೆಗೆದುಕೊಂಡ ನಂತರವೂ ಖರೀದಿಸಿದ ಉತ್ಪನ್ನದ ಬದಲು ತಪ್ಪಾದ ಬೇರೆ ಉತ್ಪನ್ನ ಮಾರಾಟ ಮಾಡುತ್ತದೆ ಅಥವಾ ಕಳುಹಿಸುತ್ತದೆ" ಎಂದು ಆದೇಶ ಹೇಳಿದೆ.
ಉತ್ಪನ್ನವನ್ನು ಮಾರಾಟ ಮಾಡಿದ ನಂತರವೂ ಮಾರಾಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಾಲಯ, "ಇಂದಿನ ದಿನಗಳಲ್ಲಿ ಸಮಯ ಮತ್ತು ಹಣದ ಉಳಿತಾಯದಿಂದಾಗಿ ಆನ್‌ಲೈನ್ ಶಾಪಿಂಗ್ ಎಲ್ಲೆಡೆ ಹರಡುತ್ತಿದೆ. ಆದರೆ ಉತ್ಪನ್ನವನ್ನು ಮಾರಾಟ ಮಾಡಿದ ನಂತರ ಕಂಪನಿಗಳ ಜವಾಬ್ದಾರಿಗಳು ಮುಗಿಯುವುದಿಲ್ಲ. ಕಂಪನಿಗಳು ತಮ್ಮ ಗ್ರಾಹಕರನ್ನು ವಂಚಿಸಲು ಮತ್ತು ಗ್ರಾಹಕರ ಹಣವನ್ನು ನುಂಗಲು ತಪ್ಪು ವಸ್ತುಗಳನ್ನು / ಉತ್ಪನ್ನವನ್ನು ಕಳುಹಿಸುವ ಮೂಲಕ ಗ್ರಾಹಕರ ಹಣವನ್ನು ಕಸಿದುಕೊಳ್ಳಲು ಯಾವುದೇ ಸ್ವಾತಂತ್ರ್ಯವಿಲ್ಲ" ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications