ಆಕರ್ಷಕ ಚಿತ್ತಾರದಿಂದ ಗಮನ ಸೆಳೆಯುತ್ತಿವೆ ಪಿಂಕ್ ಮತಗಟ್ಟೆ
ಕೊಪ್ಪಳ, ಏಪ್ರಿಲ್ 28; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮೇ 10ರಂದು ನಡೆಯುವ ಮತದಾನದ ದಿನ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಮತದಾನದ ದಿನದಂದು ಮಹಿಳೆಯರೇ ನಿರ್ವಹಣೆ ಮಾಡುವ ಪಿಂಕ್ ಮತಗಟ್ಟೆ ಪ್ರಮುಖ ಆಕರ್ಷಣೆಯಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಪಿಂಕ್, ಒಂದು ವಿಶಿಷ್ಟಚೇತನ ಹಾಗೂ ಐದು ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ. ಮತಗಟ್ಟೆಯಲ್ಲಿನ ಚಿತ್ತಾರಗಳು ಜನರನ್ನು ಆಕರ್ಷಿಸುತ್ತಿವೆ.

ಯಲಬುರ್ಗಾ ತಾಲೂಕಿನ ಬೇವೂರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಹಾಗೂ ಪಿಂಕ್ ಮತಗಟ್ಟೆಯ ವರ್ಲಿ ಚಿತ್ರಗಳು ಮತದಾರರ ಗಮನ ಸೆಳೆಯುತ್ತಿವೆ. ಮಹಿಳೆಯರಿಗಾಗಿಯೇ ವಿಶೇಷವಾಗಿ ನಿರ್ಮಿಸಿರುವ ಪಿಂಕ್ ಮತಗಟ್ಟೆ ಬಣ್ಣ ಬಣ್ಣದಿಂದ ಕೂಡಿದ್ದು ಮಹಿಳೆಯ ಆಕರ್ಷಣಿಯ ಕೇಂದ್ರವಾಗಲಿದೆ. ಮತಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯ ಇರುವಂತೆ ಈಗಾಗಲೇ ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ.
ಮತದಾನದ ಜಾಗೃತಿ; ಯಲಬುರ್ಗಾ ಪಟ್ಟಣದ ಪಟ್ಟಣ ಪಂಚಾಯತಿ ಹಾಗೂ ಸರ್ಕಾರಿ ಮಾದರಿ ಶಾಲೆಯಲ್ಲಿ ಪಿಂಕ್ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಇದು ಬಣ್ಣದಿಂದ ಕಂಗೊಳಿಸುತ್ತಿದೆ. ಇಲ್ಲಿ ವಿಶೇಷವಾಗಿ ಮಹಿಳೆಯರು ಬಂದು ಮತದಾನ ಮಾಡಲಿದ್ದು, ಅವರಿಗೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ.
ವಿಶಿಷ್ಟ ಚೇತನ ಮತಗಟ್ಟೆಯು ಕೂಡ ಯಲಬುರ್ಗಾ ಪಟ್ಟಣದಲ್ಲಿ ಸಿದ್ದಪಡಿಸಲಾಗಿದೆ. ಮುಧೋಳ ಮತ್ತು ತುಮ್ಮರಗುದ್ದಿಯಲ್ಲಿನ ಮಾದರಿ ಮತಗಟ್ಟೆಗಳು ಸಂಪೂರ್ಣ ವರ್ಲಿ ಕಲೆಯಲ್ಲಿ ಮಿಂಚುತ್ತಿವೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಅಲ್ಲಿ ಬರೆಸಲಾಗಿದೆ.

ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಯುವ ಮತಗಟ್ಟೆ, ಸಖೀ ಪಿಂಕ್ ಬೂತ್, ವಿಕಲಚೇತನ ಸ್ನೇಹಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮತಗಟ್ಟೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.
ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಾಗಲೇ ಯುವ ಮತಗಟ್ಟೆ, ಸಖೀ ಪಿಂಕ್ ಬೂತ್, ವಿಕಲಚೇತನ ಸ್ನೇಹಿ ಮತಗಟ್ಟೆಗಳ ಕುರಿತು ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ನಗರ ಪ್ರದೇಶದಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ. ಮಹಿಳೆಯರು ನಿರ್ವಹಣೆ ಮಾಡುವ ಸಖೀ ಪಿಂಕ್ ಬೂತ್ 1320, ವಿಕಲಚೇತನರು ನಿರ್ವಹಣೆ ಮಾಡುವ 224 ಮತ್ತು ಯುವಕರು ನಿರ್ವಹಣೆ ಮಾಡುವ 224 ಮತಗಟ್ಟೆಗಳು ಇರಲಿವೆ. ರಾಜ್ಯಾದ್ಯಂತ ಒಟ್ಟು 240 ಮಾದರಿ ಮತಗಟ್ಟೆಗಳು ಇರಲಿವೆ.
ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿತ್ತು. ಅಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಬಳಿಕ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 69 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಯಲಬುರ್ಗಾ, ಕನಕಗಿರಿ, ಕುಷ್ಟಗಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲಾಡಳಿತ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಮೇ 10ರಂದು ಮತದಾನ ನಡೆಯಲಿದ್ದು, ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ.
ಕೊಪ್ಪಳ ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗದ ಸೂಚನೆಯಂತೆ ಸಿದ್ಧಪಡಿಸಿ ಈಗಾಗಲೇ ಪ್ರಕಟಿಸಲಾಗಿದೆ. 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11,36,838 ನೋಂದಾಯಿತ ಮತದಾರರಿದ್ದಾರೆ. ಇವರಲ್ಲಿ ಪುರುಷರು 5,66,381 ಹಾಗೂ ಮಹಿಳೆಯರು 5,70,407 ಮತ್ತು 50 ಇತರೆ ಮತದಾರರು ಈ ಬಾರಿ ಹಕ್ಕು ಚಲಾವಣೆ ಮಾಡುವ ಅಧಿಕಾರ ಹೊಂದಿದ್ದಾರೆ.












Click it and Unblock the Notifications