ರೈತರಿಗೆ ಸಿಹಿಸುದ್ದಿ ಕೊಪ್ಪಳ ಮಾವು ಮೇಳದ ಅವಧಿ ವಿಸ್ತರಣೆ
ಕೊಪ್ಪಳ, ಮೇ 21: ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೆಶಕರ ಕಛೇರಿ ಆವರಣದಲ್ಲಿ 'ಕೊಪ್ಪಳ ಮಾವು ಮೇಳ-2025' ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯುತ್ತಿದೆ. ರೈತರ, ಜನರ ಬೇಡಿಕೆಯಂತೆ ಈ ಮೇಳವನ್ನು 4 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಮೇ 13 ರಿಂದ 22ರ ತನಕ ನಡೆಯಲಿದ್ದ 'ಕೊಪ್ಪಳ ಮಾವು ಮೇಳ-2025' ಅನ್ನು ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದ್ದರು. ಈಗ ಮಾವು ಮೇಳವನ್ನು 4 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಕೊಪ್ಪಳ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಈ ಕುರಿತು ಮಾಹಿತಿ ನೀಡಿದ್ದಾರೆ. "2025-26ನೇ ಸಾಲಿನ ಮಾವು ಮಾರಾಟ ಮೇಳವನ್ನು ಇನ್ನೂ 4 ದಿನಗಳ ಕಾಲ ಮುಂದುವರೆಸಲಾಗಿದೆ" ಎಂದು ಹೇಳಿದ್ದಾರೆ.

ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಜೊತೆಗೆ ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 22ರ ತನಕ ಆಯೋಜಿಸಲಾಗಿತ್ತು. ರೈತರು ಹಾಗೂ ಗ್ರಾಹಕರ ಒತ್ತಾಯದ ಮೇರೆಗೆ ಮಾವು ಮಾರಾಟ ಮೇಳವನ್ನು ಇನ್ನೂ 4 ದಿನಗಳ ಕಾಲ ಅಂದರೆ ಮೇ 26ರ ಸೋಮವಾರದ ತನಕ ಮುಂದುವರೆಸಲಾಗಿದೆ. ರೈತರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ 'ಕೊಪ್ಪಳ ಮಾವು ಮೇಳ' ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಈ ವರ್ಷದ ಮೇಳದ ಪ್ರಮುಖ ಆಕರ್ಷಣೆ ವಿಶ್ವದ ಅತ್ಯಂದ ದುಬಾರಿ ಮಾವು. 'ಮಿಯಾಜಾಕಿ' ಹೆಸರಿನ ಈ ಹಣ್ಣಿನ 1 ಕೆಜಿ ಬೆಲೆ 2.50 ಲಕ್ಷವಾಗಿದೆ. ಈ ಹಣ್ಣಿನ ಸಸಿಗಳನ್ನು ಸಹ ಮಾರಾಟಕ್ಕೆ ಇಡಲಾಗಿದೆ.
ಇಲಾಖೆ ವತಿಯಿಂದ 9ನೇ ವರ್ಷದ ಮಾವು ಮೇಳವನ್ನು ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ 30ಕ್ಕೂ ಹೆಚ್ಚು ಸ್ಟಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ನೈಸರ್ಗೀಕವಾಗಿ ಮಾಗಿಸಿದ ಹಣ್ಣುಗಳನ್ನು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗ್ರಾಹಕರಿಗೆ ಮಾರಕಟ್ಟೆಗಿಂತಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನೈಸರ್ಗಿಕವಾದ ಹಣ್ಣುಗಳು ಸಿಗುತ್ತಿವೆ.
ಈ ಮೇಳದಲ್ಲಿ ವೈಜ್ಞಾನಿಕವಾಗಿ ಹಣ್ಣುಗಳನ್ನು ಯಾವ ರೀತಿ ಮಾಗಿಸಬೇಕೆಂಬುವುದಕ್ಕೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ನೈಸರ್ಗಿಕವಾಗಿ ಹಣ್ಣು ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಮೇಳದಲ್ಲಿ ಜಿಲ್ಲೆಯ 10 ರಿಂದ 12 ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿಡಲಾಗಿದ್ದು, 'ಕೊಪ್ಪಳ ಕೇಸರ್' ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ.
ಮೇಳದಲ್ಲಿ ಪ್ರಮುಖವಾಗಿ ಕೊಪ್ಪಳ ಕೇಸರ್, ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ. ಇಮಾಮ ಪಸಂದ ಮುಂತಾದ ತಳಿಯ ಮಾವು ಪ್ರದರ್ಶನ ಮತ್ತು ಮಾರಾಟಕ್ಕೆ ಇದೆ. ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ಈ ಮೇಳ ವೇದಿಕೆಯಾಗಿದೆ.












Click it and Unblock the Notifications