Leopard Attack: ಕೊಪ್ಪಳ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ 13 ಕುರಿಗಳು ಬಲಿ
Leopard Attack: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಬಿಟ್ಟಿದೆ. ಅಲ್ಲದೆ, ಇವುಗಳ ದಾಳಿಯಿಂದಾಗಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಹಲವು ಜಿಲ್ಲೆಗಳಲ್ಲಿ ನಡೆದಿರುವ ಉದಾಹರಣೆಗಳಿವೆ. ಇದೀಗ ಚಿರತೆ ದಾಳಿಯಿಂದ 13 ಕುರಿಗಳು ಬಲಿ ಆಗಿರುವ ಘಟನೆ ಕೊಪ್ಪಳ ಜಿಲ್ಲೆಯ ನೇಲಜೇರಿ ಗ್ರಾಮದಲ್ಲಿ ನಡೆದಿದೆ.
ಚಿರತೆ ದಾಳಿಯಿಂದ ಸಾವನ್ನಪ್ಪಿರುವ 13 ಕುರಿಗಳು ನೇಲಜೇರಿ ಗ್ರಾಮದ ದೇವಪ್ಪ ಬೇವಿನಗಿಡದ ಅವರಿಗೆ ಸೇರಿದವಾಗಿವೆ. ಕೊಟ್ಟಿಗೆಯಲ್ಲಿ ಕುರಿಗಳನ್ನು ಕೂಡಿ ಹಾಕಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿ, ಕೊಂದುಹಾಕಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆ ಭಯಗೊಂಡ ರೈತರು ಜಾನುವಾರುಗಳನ್ನು ಮೇಯಿಸಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿಯಿಂದ ಈಗಾಗಲೇ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ ಚಿರತೆ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಬಲೆಗೆ ಬಿದ್ದ ಚಿರತೆ: ಹಸು ಮೇಯಿಸಲು ಹೋಗಿದ್ದ ರೈತನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಜಿಲ್ಲೆಯ ಗುಂಡಿಬಂಡೆ ತಾಲೂಕಿನ ವರ್ಲಕೊಂಡ ಬೆಟ್ಟದಲ್ಲಿ ಚಿರತೆಗಳು ಪ್ರತ್ಯಕ್ಷ ಆಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ನಡುವೆ ನಿನ್ನೆ ಬೆಳಗ್ಗೆ ಚಿರತೆ ದಾಳಿಯ ಆತಂಕದಲ್ಲಿಯೇ ಕರೇನಹಳ್ಳಿಯ ರೈತ ರಾಮಕೃಷ್ಣಪ್ಪ ಹಸು ಮೇಯಿಸಲು ವರ್ಲಕೊಂಡ ಬೆಟ್ಟದ ಕಡೆ ಹೋಗಿದ್ದರು.
ಈ ವೇಳೆ ಚೊಕ್ಕನಹಳ್ಳಿಯ ಕೆರೆ ಬಳಿ ಚಿರತೆ ದಿಢೀರ್ ಮಕೃಷ್ಣಪ್ಪನ ಮೇಲೆ ದಾಳಿ ನಡೆಸಿದೆ. ಅವರು ಜೋರಾಗಿ ಕೂಗಿಕೊಂಡಾಗ ಚಿರತೆ ಅಲ್ಲಿಂದ ಪರಾರಿ ಆಗಿತ್ತು. ರೈತನ ಚೀರಾಟ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ರಕ್ಷಣೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಬೆಟ್ಟದಲ್ಲಿ ಅಡಗಿದ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದರು.
ವರ್ಲಕೊಂಡ ಬೆಟ್ಟದಲ್ಲಿ ಮೂರು ಚಿರತೆಗಳು ವಾಸವಾಗಿದ್ದು, ಆಗಾಗ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದವು. ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಮಾಡಿದ ವೇಳೆ ಬೆಟ್ಟದಲ್ಲಿ ವಾಸ ಆಗಿರುವ ಚಿರತೆಗಳ ದೃಶ್ಯ ಸೆರೆ ಆಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಕಳೆದ ಒಂಡು ವಾರದ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಬೋನ್ ಸಹ ಇಟ್ಟಿದ್ದರು. ಆದರೆ, ಬೋನ್ಗೆ ಬೀಳದ ಚಿರತೆಯನ್ನು ಗ್ರಾಮಸ್ಥರೇ ಮುಂದಾಗಿ ಸೆರೆ ಹಿಡಿದಿರುವುದು ಶ್ಲಾಘನೀಯವಾಗಿದೆ.












Click it and Unblock the Notifications