CM Siddaramaiah: ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ರದ್ದು
ವಿಜಯನಗರ ಆಗಸ್ಟ್ 5: ಸಿಎಂ ಸಿದ್ದರಾಮಯ್ಯ ಅವರ ಕೊಪ್ಪಳ ಹಾಗೂ ವಿಜಯನಗರ ಪ್ರವಾಸವನ್ನು ದಿಢೀರ್ ರದ್ದು ಮಾಡಲಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯದ ಬೆನ್ನಲ್ಲೆ ಸಿದ್ದರಾಮಯ್ಯ ಅವರು ವಿಜಯನಗರ ಪ್ರವಾಸ ರದ್ದಾಗಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಂದಹಾಗೆ ನಾಳೆ (ಆಗಸ್ಟ್ 6) ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಿತ್ತು. ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಬರುವ ಒಂದು ದಿನಕ್ಕೂ ಮೊದಲೇ ರದ್ದು ಮಾಡಲಾಗಿದೆ. ಈ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ಶುರು ಮಾಡಿದೆ. ಇನ್ನೂ ಇತ್ತ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮ್ಯ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕೆಂದಿದ್ದರು. ಆ ಸಂದರ್ಭದಲ್ಲಿ ಅದೃಷ್ಟವಷಾತ್ ವಾಪಸ್ ಕಳುಹಿಸಲಾಯಿತು. ಇಲ್ಲದಿದ್ದರೆ ಬಂಗಾರದ ಭೂಮಿಯ ಕೋಲಾರಕ್ಕೆ ಕೆಟ್ಟ ಹೆಸರಿನ ಶಾಪ ತಟ್ಟುತ್ತಿತ್ತು. ಸಿದ್ದರಾಮಯ್ಯ ದಲಿತ ಪರ ಎಂದು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎಸ್ಸಿ,ಟಿಪಿಎಸ್ಸಿಗಳ ವಿವಿಧ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಅನುದಾನ ಗ್ಯಾರಂಟಿಗಳಿಗೆ 25369 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರು. ಇಟ್ಟಿದ್ದರೂ ಈ ಹಣವನ್ನು ಏಕೆ ಪಡೆದುಕೊಂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ ಅನುದಾನ ನೇರವಾಗಿ ಚಿನ್ನದ ಅಂಗಡಿಗಳಿಗೆ ಹೇಗೆ ವರ್ಗಾವಣೆ ಮಾಡಿದ್ದಾರೆ, ಅನುದಾನ ದುರ್ಬಳಿಕೆ ಆಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ. ಮೈಸೂರಿನ ಮುಡಾ ಯೋಜನೆಯಲ್ಲಿ 1992 - 93 ರಲ್ಲಿ ನೋಟಿಫೀಕೇಷನ್ ಆಗಿದ್ದರೂ ಡಿ ನೋಟಿಫಿಕೇಷನ್ ಜಾರಿಯಾಗಿರಲಿಲ್ಲ. ಅವರಿಗೆ ಆಗಲೇ 40 ಲಕ್ಷ ರೂ 3 ಕುಟುಂಬಗಳಿಗೆ ಪರಿಹಾರ ಘೋಷಿಸಿತ್ತು ಅವರು ಪಡೆಯದೆ ಹೋದಾಗ ನ್ಯಾಯಾಲಯದ ಸೂಚನೆಯಂತೆ ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಲಾಗಿತ್ತು ನಂತರದಲ್ಲಿ ಕುಟುಂಬದವರಿಂದ ಪತ್ರ ಪಡೆದು ಅಕ್ರಮವಾಗಿ ಡಿ. ನೋಟಿಫೀಕೇಷನ್ ಮಾಡಿದರು ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಹೀಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಉಳಿಯುವುದು ಇನ್ನೂ ಒಂದು ವಾರ ಮಾತ್ರ ಎಂದು ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಪಾದಯಾತ್ರೆ, ಸದ್ಯದ ಬೆಳವಣಿಗೆಯನ್ನು ಕಂಡರೆ ಸಿದ್ದರಾಮಯ್ಯ ಸಿಎಂ ಖುರ್ಚಿಗೆ ಕಂಠಟ ಶುರುವಾಗಿದಿಯಾ ಅನ್ನೋ ಅನುಮಾನ ಶುರುವಾಗಿದೆ.












Click it and Unblock the Notifications