Gangavathi: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ & ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಜನಾರ್ದನ ರೆಡ್ಡಿ ಪ್ಲಾನ್: ಮಾಹಿತಿ
ಗಂಗಾವತಿ, ಮಾರ್ಚ್, 24: ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿವೆ.ಇದೇ ರೀತಿ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗಂಗಾವತಿ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರು. ಗಂಗಾವತಿ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗಂಗಾವತಿಯ ವಿಶೇಷತೆ ಏನು?
ಗಂಗಾವತಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಈ ತಾಲೂಕು ಭತ್ತದ ಬೆಳೆಗೆ ಪ್ರಸಿದ್ಧಿಯನ್ನು ಪಡೆದಿದ್ದು ಇದನ್ನು 'ಭತ್ತದ ಕಣಜ' ಎಂದೂ ಕರೆಯುತ್ತಾರೆ. ಇದು ಜಿಲ್ಲೆಯ ಅತ್ಯಂತ ದೊಡ್ಡ ವಾಣಿಜ್ಯ ನಗರವಾಗಿದ್ದು, ಅಕ್ಕಿ ಇಲ್ಲಿನ ಪ್ರಮುಖ ಬೆಳೆಯಾಗಿದೆ. ತಾಲೂಕು ಸಕ್ಕರೆ ಕಾರ್ಖನೆಗಳಿಗೂ ಹೆಸರುವಾಸಿಯಾಗಿದೆ. ಗಂಗಾವತಿಯ ಬಳಿ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ಸ್ಥಳಗಳಿವೆ.

ಕನಕಗಿರಿಯ ವೆಂಕಟಛಲಪತಿ ದೇವಾಲಯ, ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ರಾಘವೇಂದ್ರ ದೇವರ ನವ ಬೃಂದಾವನ, ಹೇಮಗುಡ್ಡ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಂಪಾಪತಿ, ಮುದ್ದಾನೇಶ್ವರಿ, ನೀಲಕಂಠೇಶ್ವರ ದೇವಸ್ಥಾನ ನಗರದ ವ್ಯಾಪ್ತಿಯೊಳಗೆ ಬರುತ್ತದೆ. ಇನ್ನು ಇಲ್ಲಿನ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದು ತಿಳಿಯೋಣ ಬನ್ನಿ.
ಗಾಂಗಾವತಿ ಕ್ಷೇತ್ರ ಪರಿಚಯ
ಇಲ್ಲಿ 2018ರಲ್ಲಿ ಬಿಜೆಪಿ ಪಕ್ಷದ ಪರಣ್ಣ ಮುನವಳ್ಳಿ ಗೆಲುವು ಸಾಧಿಸಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಅವರನ್ನು 7973 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಇದೀಗ ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಗಂಗಾವತಿಯಲ್ಲಿ "ಕೈ" ಟಿಕೆಟ್ ಹಂಚಿಕೆಯೇ ಒಂದು ದೊಡ್ಡ ಸವಾಲಾಗಿದೆ.
ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಎಚ್.ಆರ್. ಶ್ರೀನಾಥ್‌ರ ಒಗ್ಗಟ್ಟು ಪ್ರದರ್ಶಿಸಿದರೆ, ಇದು ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಬಿಕ್ಕಟ್ಟು ಆದಂತಾಗಿದೆ. ಶ್ರೀನಾಥ್ ಜೆಡಿಎಸ್ ತೊರೆದು 9 ತಿಂಗಳ ಹಿಂದೆಯೇ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಆದರೆ ಮಲ್ಲಿಕಾರ್ಜುನ್ ನಾಗಪ್ಪ ಮೂಲ ಕಾಂಗ್ರೆಸಿಗರು ಆಗಿದ್ದರಿಂದ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಇಕ್ಬಾಲ್ ಅನ್ಸಾರಿಯ ರಾಜಕೀಯದ ಹಾದಿ
2004ರಿಂದ 2013ರವರೆಗಿನ ಸಮಯದಲ್ಲಿ ಇಕ್ಬಾಲ್ ಅನ್ಸಾರಿ ಮೂರು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಎರಡು ಜನರಭೇರಿ ಬಾರಿದ್ದರು. ನಂತರ 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸೋಲನುಭವಿಸಿದ್ದರು. ಈ ಬಾರಿ ಮೂವರು ಆಕಾಂಕ್ಷಿಗಳಿದ್ದು, ಇದರಿಂದ ಪಕ್ಷದ ಹೈಕಮಾಂಡ್‌ಗೆ ಟಿಕೆಟ್ ಹಂಚಿಕೆಯದ್ದೇ ತಲೆನೋವಾಗಿ ಪರಿಣಮಿಸಿದೆ. ಯಾರಿಗೇ ಟಿಕೆಟ್ ಕೊಟ್ಟರೂ ಉಳಿದ ಆಕಾಂಕ್ಷಿಗಳು ಅಸಮಾಧಾನಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ನಿಭಾಯಿಸುವುದೇ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್‌ನಲ್ಲಿ "ಟಿಕೆಟ್" ಪೈಪೋಟಿ
ಕ್ಷೇತ್ರದಲ್ಲಿ ಚುನಾವಣಾ ತಯಾರಿ ಆರಂಭ ಆದಾಗಿನಿಂದಲೂ ಗಂಗಾವತಿ ಕಾಂಗ್ರೆಸ್ ಒಡೆದ ಮನೆ ಆಗಿದೆ. ಮಲ್ಲಿಕಾರ್ಜುನ ನಾಗಪ್ಪ ಮತ್ತು ಶ್ರೀನಾಥ್ ಪಕ್ಷದ ಕಾರ್ಯಕ್ರಮಗಳನ್ನು ಒಂದೇ ಕಡೆ ಸಂಘಟಿಸುತ್ತಿದ್ದಾರೆ. ಆದರೆ ಅನ್ಸಾರಿ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ನಡೆಸಿ ಕುತೂಹಲ ಮೂಡಿಸಿದ್ದಾರೆ. ಆದ್ದರಿಂದ ಪಕ್ಷದ ಯಾವುದೇ ಕಾರ್ಯಕ್ರಮಳಿದ್ದರೂ ಎರಡು ಬಾರಿ ಮಾಡಲಾಗುತ್ತದೆ.
ಲಾಭ ಪಡೆಯಲು ರೆಡ್ಡಿ ಮಾಡಿದ ಪ್ಲಾನ್ ಏನು?
ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಅನ್ಸಾರಿ ಗುರುತಿಸಿಕೊಂಡಿದ್ದರೆ, ಡಿ.ಕೆ.ಶಿವಕುಮಾರ್ ಜೊತೆ ಶ್ರೀನಾಥ ಮತ್ತು ಮಲ್ಲಿಕಾರ್ಜುನ್ ನಾಗಪ್ಪ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕುವಂತೆ ಆಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್‌ನ ಒಡಕಿನ ಲಾಭ ಗಿಟ್ಟಿಸಿಕೊಳ್ಳಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಭಾರಿ ಕಸರತ್ತು ನಡೆಸಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ ಪ್ಲಾನ್ ಹೇಗಿದೆ?
ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ರೆಡ್ಡಿ ಬಿಜೆಪಿ ಹಾಗೂ ಕಾಂಗ್ರೆಸ್ ಮತಗಳ ಲಾಭವನ್ನು ಪಡೆಯಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಬಂದಿದ್ದ ನಳಿನ್ ಕುಮಾರ್ ಕಟಿಲ್ ಕೂಡ ಹನುಮ ಉದಯಿಸಿದ ನಾಡು ಅಂಜನಾದ್ರಿ ಕ್ಷೇತ್ರದಲ್ಲಿ ಹಿಂದೂ ಶಾಸಕರೇ ಅಧಿಕಾರಲ್ಲಿ ಇರಬೇಕು ಎಂದು ಹೇಳಿದ್ದರು. ಈ ಮೂಲಕ ಆಂಜನೇಯನ ಜಪ ಮಾಡಿ ಬಿಜೆಪಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಸಂಚಲನ ಸೃಷ್ಟಿಸಿದ ರೆಡ್ಡಿ ಸ್ಪರ್ಧೆ
ಜನಾರ್ದನ ರೆಡ್ಡಿಯವರು ಈ ಬಾರಿ ಗಂಗಾವತಿಯಿಂದ ಸ್ಪರ್ಧೆಗಿಳಿಯುವುದರಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದಂತಾಗಿದೆ. ರೆಡ್ಡಿ ಆಗಮಿಸುತ್ತಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಚುನಾವಣಾ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿದ್ದಾರೆ. ಬಿಜೆಪಿಯಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ನನಗೆ ಟಿಕೆಟ್ ಎಂದು ತಾವೇ ಘೋಷಿಸಿಕೊಂಡಿದ್ದು, ಕಾಂಗ್ರೆಸ್ ಟಿಕೆಟ್‌ಗಾಗಿ ಮೂವರು ಸಮರ ಮುಂದುವರೆಸಿದ್ದಾರೆ.
ಕ್ಷೇತ್ರದಲ್ಲಿನ ಮತದಾರರ ವಿವರ
ಇನ್ನು ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಹಾಗೂ ಕುರುಬ ಜನಾಂಗದ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಮುಸ್ಲಿಂ ಮತಗಳು ನಗರ ಪ್ರದೇಶದಲ್ಲಿ ಇದ್ದರೆ, ಗ್ರಾಮೀಣ ಭಾಗದಲ್ಲಿ ಲಿಂಗಾಯತ ಹಾಗೂ ಕುರುಬ ಮತಗಳು ಅಧಿಕವಾಗಿವೆ. ಗಂಗಾವತಿಯಲ್ಲಿ ದೇವಸ್ಥಾನ ಹಾಗೂ ಮಸೀದಿಗಳಿಗೆ ಭೇಟಿ ನೀಡುತ್ತಿರುವ ಜನಾರ್ದನ ರೆಡ್ಡಿ, ಬಿಜೆಪಿ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಕಾರ್ಯಕರ್ತರು ಹಾಗೂ ಇಕ್ಬಾಲ್ ಅನ್ಸಾರಿಯವರ ಬೆಂಬಲಿಗರನ್ನು ಸಂಪರ್ಕಾ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಈ ಮೂಲಕ ಗಂಗಾವತಿಯಲ್ಲಿ ಪರಣ್ಣ ಹಾಗೂ ಇಕ್ಬಾಲ್ ಅನ್ಸಾರಿ ಅವರಿಗೆ ಬಿಸಿಮುಟ್ಟಿಸಲು ರೆಡ್ಡಿ ನಿರ್ಧಾರ ಮಾಡಿದ್ದಾರೆ. ಈ ನಡುವೆಯೇ ಬಳ್ಳಾರಿಯ ರೀತಿಯಲ್ಲಿ ಗಂಗಾವತಿಯನ್ನು ಸಹ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಆಗಿರುವ ಆನೆಗೊಂದಿ ಹಾಗೂ ಹನುಮನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳುವ ಮೂಲಕ ಮತಬೇಟೆಯನ್ನು ಆರಂಭ ಮಾಡಿದ್ದಾರೆ.
ಇದನ್ನೆಲ್ಲ ಗಮನಿಸಿದರೆ ಗಂಗಾವತಿಗೆ ರೆಡ್ಡಿ ಎಂಟ್ರಿ ಆದಾಗಿನಿಂದ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಳಮಳ ಉಂಟಾಗಿದೆ. ಹಾಗಾದರೆ ಇಲ್ಲಿ ಯಾವ ಪಕ್ಷದಿಂದ ಯಾರು ಆಕಾಂಕ್ಷಿಗಳಾಗಿ ಅಖಾಡಕ್ಕಿಳಿಯಲಿದ್ದಾರೆ ಮತ್ತು ಕ್ಷೇತ್ರದಲ್ಲಿ ಅವರ ಕ್ರೀಯಾಶೀಲತೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications