Gadag-Wadi Railway Line: ಗದಗ-ವಾಡಿ ರೈಲು ಮಾರ್ಗ, ಕುಷ್ಟಗಿಗೆ ಬಂದ ಮೊದಲ ರೈಲು
ಕೊಪ್ಪಳ, ಮಾರ್ಚ್ 31: ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ಯೋಜನೆಯೊಂದರ ಅಪ್‌ಡೇಟ್ ಸಿಕ್ಕಿದೆ. 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿಯೂ ಈ ರೈಲು ಯೋಜನೆಗೆ ಸರ್ಕಾರ 549.45 ಕೋಟಿ ಅನುದಾನವನ್ನು ನೀಡಿದೆ. 257 ಕಿ. ಮೀ. ಉದ್ದದ ಗದಗ-ವಾಡಿ ರೈಲು ಮಾರ್ಗದ ಭಾಗವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ರೈಲು ಸಂಪರ್ಕ ಸಿಕ್ಕಿದೆ. ದಶಕಗಳ ಬೇಡಿಕೆ ಈಡೇರಿದ ಸಂತಸದಲ್ಲಿರುವ ಜನರು ಪ್ರಾಯೋಗಿಕ ಸಂಚಾರಕ್ಕೆ ಆಗಮಿಸಿದ ರೈಲನ್ನು ಕಂಡು ಸಂಭ್ರಮಿಸಿದರು.
ಗದಗ-ವಾಡಿ ರೈಲು ಮಾರ್ಗದ ಭಾಗವಾಗಿ ಕುಷ್ಟಗಿ ತನಕ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಇಲಾಖೆ ಅಧಿಕಾರಿಗಳು, ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಈ ಮಾರ್ಗದಲ್ಲಿ ವೇಗ ಮತ್ತು ವಿವಿಧ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕುಷ್ಟಗಿ ಜನರ ಬಹು ವರ್ಷಗಳ ಬೇಡಿಕೆಯಂತೆ ಪಟ್ಟಣಕ್ಕೆ ರೈಲು ಸಂಪರ್ಕ ಸಿಕ್ಕಿದೆ.

ಲಿಂಗನಬಂಡಿ-ಕುಷ್ಟಗಿ ನಡುವಿನ ಮಾರ್ಗದಲ್ಲಿ ರೈಲ್ವೆ ಇಲಾಖೆ ಇಂಜಿನಿಯರ್‌ಗಳು, ಅಧಿಕಾರಿಗಳು ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲಿನ ವೇಗದ ಪರೀಕ್ಷೆ, ಅತಿಭಾರದ ಪರೀಕ್ಷೆಯನ್ನು ನಡೆಸಿದರು. ಕುಷ್ಟಗಿಗೆ ರೈಲು ಆಗಮಿಸುತ್ತಿದ್ದಂತೆಯೇ ಜನರು ಸಂಭ್ರಮಿಸಿದರು. ಅಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ರೈಲು ಸಂಚಾರ ಯಾವಾಗ ಆರಂಭ?: ರೈಲ್ವೆ ಸುರಕ್ಷತಾ ಆಯುಕ್ತರು ನೀಡುವ ಪ್ರಯಾಣ ಪತ್ರದ ಆಧಾರದ ಮೇಲೆ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಆರಂಭಿಸಲಿದೆ. ಆದ್ದರಿಂದ ಯಾವುದೇ ರೈಲು ಯೋಜನೆಯಾದರೂ ಸಹ ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಮಹತ್ವವನ್ನು ಪಡೆದುಕೊಂಡಿದೆ. ತಾಂತ್ರಿಕ ಕೆಲಸಗಳು ಪೂರ್ಣಗೊಂಡರೆ ಏಪ್ರಿಲ್ ಅಂತ್ಯಕ್ಕೆ ಗದಗ-ವಾಡಿ ಮಾರ್ಗದಲ್ಲಿ ಕುಷ್ಟಗಿ ತನಕ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಸುಮಾರು ಒಂದು ವರ್ಷ ತಡವಾಗಿ ಕುಷ್ಟಗಿ ತನಕ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ಈಗಾಗಲೇ ಕುಷ್ಟಗಿ ರೈಲು ನಿಲ್ದಾಣದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹಂಪಿ, ಆನೆಗುಂದಿ, ಅಂಜನಾದ್ರಿ ಬೆಟ್ಟದ ಚಿತ್ರಗಳನ್ನು ಕುಷ್ಟಗಿ ರೈಲು ನಿಲ್ದಾಣದ ಮೇಲೆ ಚಿತ್ರಿಸಲಾಗಿದೆ. ನೂರಾರು ಜನರು ಕುಷ್ಟಗಿಗೆ ಆಗಮಿಸಿದ ಪ್ರಾಯೋಗಿಕ ರೈಲನ್ನು ಸ್ವಾಗತಿಸಿದರು.
ಕೆಲವು ದಿನಗಳ ಹಿಂದೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ ಗದಗ- ವಾಡಿ ನಡುವಿನ 257 ಕಿ. ಮೀ. ರೈಲು ಮಾರ್ಗವನ್ನು 2026ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ಸಹ ಈ ಯೋಜನೆಗೆ ಅನುದಾನವನ್ನು ನೀಡುತ್ತಿದೆ.
ಗದಗ- ವಾಡಿ ನಡುವಿನ ರೈಲು ಮಾರ್ಗದ ವೆಚ್ಚ 1922 ಕೋಟಿ ರೂ.ಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50ರಷ್ಟು ವೆಚ್ಚ ಹಂಚಿಕೆ ಆಧಾರದ ಮೇಲೆ ಯೋಜನೆಯನ್ನು ಕೈಗೊಂಡಿವೆ. 4002 ಎಕರೆ ಭೂಮಿಯನ್ನು ಯೋಜನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಗದಗ-ತಳಕಲ್ ತನಕ ಈಗಾಗಲೇ ರೈಲು ಹಳಿ ಇದೆ. ತಳಕಲ್-ಕುಷ್ಟಗಿ ನಡುವಿನ 57 ಕಿ. ಮೀ. ರೈಲು ಮಾರ್ಗದ ಕಾಮಗಾರಿ ಹನುಮಾಪುರ ತನಕ ಮುಗಿದಿತ್ತು. ಈಗ ಕುಷ್ಟಗಿ ತನಕ ಕಾಮಗಾರಿಯನ್ನು ಮುಗಿಸಿ, ಪ್ರಾಯೋಗಿಕ ಸಂಚಾರವನ್ನು ಕುಷ್ಟಗಿ ರೈಲು ನಿಲ್ದಾಣದ ತನಕ ಯಶಸ್ವಿಯಾಗಿ ನಡೆಸಲಾಗಿದೆ.
ಮೊದಲು ಗದಗ-ವಾಡಿ ರೈಲು ಮಾರ್ಗವನ್ನು ವಯಾ ಇಳಕಲ್ ಎಂದು ಯೋಜಿಸಲಾಗಿತ್ತು. ಆದರೆ ಕಾಮಗಾರಿ ಆರಂಭವಾಗುವಾಗ ಕೊಪ್ಪಳ ಹೊರವಲಯದ ತಳಕಲ್ ಮೂಲಕ ವಾಡಿ ಎಂದು ಯೋಜನೆಯನ್ನು ಬದಲಾವಣೆ ಮಾಡಲಾಯಿತು. ಇದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ದಕ್ಷಿಣ ಮಧ್ಯ ರೈಲ್ವೆ 1996-97ರಲ್ಲಿ ಗದಗ-ವಾಡಿ ರೈಲು ಯೋಜನೆ ವಿನ್ಯಾಸಗೊಳಿಸಿತ್ತು.












Click it and Unblock the Notifications