'ಕಂದಹಾರ್ ಒತ್ತೆಯಾಳುಗಳ ಬದಲು ತಾವೇ ಹೋಗಲು ಸಿದ್ಧರಾಗಿದ್ದ ಮಮತಾ ಬ್ಯಾನರ್ಜಿ!'
ಕೋಲ್ಕತಾ, ಮಾರ್ಚ್ 13: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದು, ಪ್ರಸ್ತುತ ಬಿಜೆಪಿಯ ಕಟು ಟೀಕಾಕಾರರಾಗಿರುವ ಹಿರಿಯ ಮುಖಂಡ ಯಶವಂತ್ ಸಿನ್ಹಾ, ಶನಿವಾರ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದರ ಬೆನ್ನಲ್ಲೇ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಉಗ್ರರು ಕಂದಹಾರ್‌ನಲ್ಲಿ ಹೈಜಾಕ್ ಮಾಡಿದ್ದ ಸಂದರ್ಭದಲ್ಲಿ ಆಗ ಕೇಂದ್ರ ಸಚಿವರಾಗಿದ್ದ ಮಮತಾ ಬ್ಯಾನರ್ಜಿ, ವಿಮಾನದಲ್ಲಿನ ಪ್ರಯಾಣಿಕರ ಬದಲು ತಾವು ಒತ್ತೆಯಾಳಾಗಿ ಇರಲು ಸಿದ್ಧ ಎಂದು ತಿಳಿಸಿದ್ದರು ಎಂಬುದಾಗಿ ಸಿನ್ಹಾ ಹೇಳಿದ್ದಾರೆ. ಘಟನೆ ನಡೆದು ಎರಡು ದಶಕಗಳ ಬಳಿಕ ಸಿನ್ಹಾ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
ಅಟಲ್ ಸಂಪುಟದಲ್ಲಿ ತಮ್ಮ ಸಹೋದ್ಯೋಗಿಯಾಗಿದ್ದ ಮಮತಾ ಬ್ಯಾನರ್ಜಿ ಅವರೊಂದಿಗಿನ ದಿನಗಳನ್ನು ನೆನಪಿಸಿಕೊಂಡಿರುವ ಸಿನ್ಹಾ, ಟಿಎಂಸಿ ಮುಖ್ಯಸ್ಥೆ ಮಮತಾ ಅವರು ಆರಂಭದಿಂದಲೂ ಹೋರಾಟಗಾರ್ತಿಯಾಗಿದ್ದರು, ಈಗಲೂ ಅದೇ ಉತ್ಸಾಹದೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ. ಮುಂದೆ ಓದಿ.

ತ್ಯಾಗಕ್ಕೆ ಸಿದ್ಧರಾಗಿದ್ದ ಮಮತಾ
'ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿ ಕಂದಹಾರ್‌ನಲ್ಲಿ ಇಳಿಸಿದ್ದ ಸಂದರ್ಭದಲ್ಲಿ ಸಂಪುಟದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದವು. ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರನ್ನು ಬಿಡುಗಡೆ ಮಾಡಬೇಕೆಂಬ ಷರತ್ತು ಮುಂದಿಟ್ಟು ತಾವು ಒತ್ತೆಯಾಳಾಗಿ ಹೋಗಲು ಸಿದ್ಧ ಎಂಬ ಹೇಳಿಕೆ ನೀಡಿದ್ದರು. ಅವರು ದೊಡ್ಡ ತ್ಯಾಗ ಮಾಡಲು ಸಿದ್ಧರಾಗಿದ್ದರು ಎಂಬುದನ್ನು ಇಂದು ತಿಳಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

ಅಪಹರಣಗೊಂಡಿದ್ದ ವಿಮಾನ
ಕಂದಹಾರ್ ಹೈಜಾಕ್ ಪ್ರಕರಣ ನಡೆದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರದಲ್ಲಿ ಮಮತಾ ರೈಲ್ವೆ ಸಚಿವರಾಗಿದ್ದರು. ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿ ಕಡೆಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಮೃತಸರ ಸೇರಿದಂತೆ ನಡುವೆ ಇಳಿಸಿ ಬಳಿಕ ಕಂದಹಾರ್‌ಗೆ ಅಪಹರಿಸಲಾಗಿತ್ತು.

ಉಗ್ರರ ಬಿಡುಗಡೆ
ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೊಲೆ ಮಾಡುವುದಾಗಿ ಉಗ್ರರ ಬೆದರಿಕೆಗೆ ಮಣಿದಿದ್ದ ಸರ್ಕಾರ, ತನ್ನ ಸೆರೆಯಲ್ಲಿದ್ದ ಪ್ರಮುಖ ಉಗ್ರರಾದ ಮುಷ್ತಾಕ್ ಅಹ್ಮದ್ ಜರ್ಗರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮಸೂದ್ ಅಝರ್ ಅವರನ್ನು ಬಿಡುಗಡೆ ಮಾಡಿತ್ತು. ಬಳಿಕ ಪ್ರಯಾಣಿಕರು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದರು.

ಬಿಜೆಪಿ ಜತೆಗೆ ಯಾರೂ ಇಲ್ಲ
'ದೇಶವು ಇಂದು ಹಿಂದೆಂದೂ ಕಾಣದ ಸನ್ನಿವೇಶ ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿಯು ಪ್ರಜಾಪ್ರಭುತ್ವದಲ್ಲಿನ ಸಂಸ್ಥೆಗಳ ಬಲದ ಮೇಲೆ ಅವಲಂಬಿತವಾಗಿದೆ. ನ್ಯಾಯಾಂಗ ಸೇರಿದಂತೆ ಈ ಎಲ್ಲ ಸಂಸ್ಥೆಗಳೂ ಈಗ ದುರ್ಬಲವಾಗಿವೆ. ಅಟಲ್‌ಜಿ ಅವರ ಸಮಯದಲ್ಲಿ ಬಿಜೆಪಿ ಸಹಮತವನ್ನು ನಂಬಿತ್ತು. ಆದರೆ ಈಗಿನ ಸರ್ಕಾರ ವಿಧ್ವಂಸಕತೆ ಹಾಗೂ ಆಕ್ರಮಣದಲ್ಲಿ ನಂಬಿಕೆ ಇರಿಸಿಕೊಂಡಿದೆ. ಅಕಾಲಿಗಳು, ಬಿಜೆಡಿ ಎಲ್ಲರೂ ಬಿಜೆಪಿಯನ್ನು ತೊರೆದಿದ್ದಾರೆ. ಇಂದು ಬಿಜೆಪಿ ಜತೆಗೆ ಯಾರು ನಿಲ್ಲುತ್ತಾರೆ?' ಎಂದು ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications