ಮಹಿಳೆಯರು ತಮಗೆ ಬೇಕೆಂದ ರೀತಿ ಸೀರೆ ಉಡುತ್ತಾರೆ, ನಿಮಗೇನು: ಟಿಎಂಸಿ
ಕೋಲ್ಕತ್ತಾ, ಮಾರ್ಚ್ 27: ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾಗಿದೆ. 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಇಂದಿನಿಂದ ಆರಂಭವಾಗಿದೆ. ಬಿಜೆಪಿ-ಟಿಎಂಸಿ ನಡುವೆ ನೇರ ಹಣಾಹಣಿ ಇದ್ದು, ತಾವು ಈ ಬಾರಿ ಗೆದ್ದೇ ಗೆಲ್ಲುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ ಶನಿವಾರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸವಾಲಿನ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು "ಬಂಗಾಳದ ಮಗಳು" ಎಂದು ಕರೆದಿರುವ ಅವರು, ನಂದಿಗ್ರಾಮದಲ್ಲಿ ದ್ರೋಹಿ ಸುವೇಂದು ಅಧಿಕಾರಿಯನ್ನು ಅವರು ಸೋಲಿಸಿಯೇ ತೀರುತ್ತಾರೆ ಎಂದು ಸವಾಲು ಹಾಕಿದ್ದಾರೆ.
ಸೀರೆ ಸಭ್ಯತೆಯ ಸಂಕೇತ: 'ಬರ್ಮುಡಾ' ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಅಧ್ಯಕ್ಷ
ಈಚೆಗೆ ಮಮತಾ ಬ್ಯಾನರ್ಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೂ ಪ್ರತಿಕ್ರಿಯಿಸಿ, "ಮಹಿಳೆಯರು ತಮಗೆ ಬೇಕೆಂದ ರೀತಿ ಸೀರೆ ಉಡುತ್ತಾರೆ. ಅದಕ್ಕೆ ನೀವು ಪ್ರತಿಕ್ರಿಯೆ ನೀಡುವುದು ಬೇಕಿಲ್ಲ" ಎಂದು ಖಾರವಾಗಿ ಟೀಕಿಸಿದ್ದಾರೆ.
ಈಚೆಗಷ್ಟೆ, ತಮ್ಮ ಕಾಲುಗಳನ್ನು ಪ್ರದರ್ಶಿಸಲು ಮಮತಾ ಬ್ಯಾನರ್ಜಿ ಅವರು ಸೀರೆ ಬಿಚ್ಚಿ ಬರ್ಮುಡಾ ಚಡ್ಡಿ ಧರಿಸಬೇಕು ಎಂದು ದಿಲೀಪ್ ಘೋಷ್ ಹೇಳಿಕೆ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಗೊಂಡಿತ್ತು.
ಶನಿವಾರ 30 ಕ್ಷೇತ್ರಗಳಿಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾಗಿದ್ದು, 191 ಅಭ್ಯರ್ಥಿಗಳ ಹಣೆಬರಹವನ್ನು 73 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.