ಕೇಂದ್ರದ ವಿರುದ್ಧದ ಮಮತಾ ನಿಲವಿಗೆ ಸಿಪಿಎಂ ಹೇಳೋದೇನು?
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಫೆಬ್ರವರಿ 4: ಸಿಬಿಐ ಅಧಿಕಾರಿಗಳ ನಡೆಗೆ ವಿರುದ್ಧವಾಗಿ ಮಮತಾ ಬ್ಯಾನರ್ಜಿ ತೆಗೆದುಕೊಂಡ ತೀರ್ಮಾನಕ್ಕೆ ವಿರೋಧ ಪಕ್ಷಗಳು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗೆ ಬೆಂಬಲವಾಗಿ ನಿಂತಿವೆ. ಪಶ್ಚಿಮ ಬಂಗಾಲದ ಘಟನೆಯು ಬಿಜೆಪಿಯು ಸ್ವಾಯತ್ತ ಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಗಳ ಮುಂದುವರಿದ ಭಾಗ ಎಂದು ಮಮತಾ ಬಣ್ಣಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಪ್ ನ ಅರವಿಂದ್ ಕೇಜ್ರಿವಾಲ್, ಟಿಡಿಪಿಯ ಚಂದ್ರಬಾಬು ನಾಯ್ಡು, ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸಿಪಿಎಂ ಈ ವಿಷಯದಲ್ಲಿ ಭಿನ್ನ ನಿಲುವು ಹೊಂದಿದೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸದ್ಯದ ಸನ್ನಿವೇಶಕ್ಕೆ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಚಿಟ್ ಫಂಡ್ ಹಗರಣ ಬಯಲಾಗಿ ವರ್ಷಗಳೇ ಕಳೆದಿವೆ. ಆ ಹಗರಣದಲ್ಲಿನ ಪ್ರಮುಖ ಮಾಸ್ಟರ್ ಮೈಂಡ್ ಬಿಜೆಪಿ ಸೇರಿದ್ದರಿಂದ ಮೋದಿ ಸರಕಾರ ಮೌನ ವಹಿಸಿಬಿಟ್ಟಿತು ಎಂದಿದ್ದಾರೆ.

ಕೋಲ್ಕತ್ತಾದಲ್ಲಿ ಬಿಜೆಪಿ ಹಾಗೂ ಟಿಎಂಸಿಯ ಈ ನಾಟಕವು ಯಾವುದೇ ಸಿದ್ಧಾಂತ ಉಳಿಸಲು ನಡೆಸುತ್ತಿರುವ ಹೋರಾಟವಲ್ಲ. ತಮ್ಮ ಪಕ್ಷದಲ್ಲಿನ ಭಷ್ಟರು ಹಾಗೂ ಭ್ರಷ್ಟಾಚಾರವನ್ನು ಮುಚ್ಚಿಡುವ ಪ್ರಯತ್ನ. ಈ ಪ್ರಜಾಪ್ರಭುತ್ವವಲ್ಲದ, ಭ್ರಷ್ಟ, ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಸಿಪಿಎಂ ಹೋರಾಡುತ್ತಿದೆ ಹಾಗೂ ಇದನ್ನು ಮುಂದುವರಿಸುತ್ತದೆ ಎಂದಿದ್ದಾರೆ.
ಕೋಲ್ಕತ್ತಾದ ಕಮಿಷನರ್ ರಾಜೀವ್ ಕುಮಾರ್ ರನ್ನು ಭಾನುವಾರ ಸಂಜೆ ಬಂಧಿಸಲು ಸಿಬಿಐ ಮುಂದಾದಾಗ ಬಿಕ್ಕಟ್ಟು ಆರಂಭವಾಯಿತು. ಕಮಿಷನರ್ ಮನೆಯೊಳಗೆ ಸಿಬಿಐ ಅಧಿಕಾರಿಗಳನ್ನು ಬಿಡಲಿಲ್ಲ. ಭಾನುವಾರ ರಾತ್ರಿ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಸರಕಾರದ ವಿರುದ್ಧ ಧರಣಿ ಆರಂಭಿಸಿದರು.
ಇದೇ ವಿಚಾರವು ಸಂಸತ್ ನಲ್ಲಿ ಸೋಮವಾರ ಚರ್ಚೆಗೆ ಬಂದು, ವಿಪಕ್ಷಗಳು 'ಬಿಜೆಪಿ ಹಠಾವೋ' ಎಂದು ಸರಕಾರದ ವಿರುದ್ಧ ವಿಪಕ್ಷಗಳು ಘೋಷಣೆ ಕೂಗಿದವು. ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಈ ವೇಳೆ ಎಚ್ಚರಿಕೆ ನೀಡಿದರು. ಪಶ್ಚಿಮ ಬಂಗಾಲದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬೀಳಬಹುದು ಮತ್ತು ಅಂಥ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕೆ ಇದೆ ಎಂದಿದ್ದಾರೆ.












Click it and Unblock the Notifications