ಪಶ್ಚಿಮ ಬಂಗಾಳ ಚುನಾವಣೆ: ಮೊದಲ ಹಂತದಲ್ಲಿ ಶೇ.84.13ರಷ್ಟು ಮತದಾನ
ಕೋಲ್ಕತ್ತಾ, ಮಾರ್ಚ್ 28: ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ.84.13ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಒಟ್ಟು 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಆಯೋಗ ನಿಖರ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಪುರ್ಬಾ ಮದಿನಿಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಅಂದರೆ ಶೇ. 86.32 ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಜಾರ್ಗ್ರಾಮ್ (ಶೇ .84.74), ಪಾಸ್ಚಿಮ್ ಮದಿನಿಪುರ (ಶೇ .84.71), ಬಂಕುರಾ (ಶೇ .84.27) ಮತ್ತು ಪುರುಲಿಯಾ (ಶೇ .81.77). ಜಿಲ್ಲೆಗಳಿವೆ ಎಂದು ಆಯೋಗ ಮಾಹಿತಿ ನೀಡಿದೆ.
ಗೆಲ್ಲಲು ಸಹಾಯ ಮಾಡುವಂತೆ ಎದುರಾಳಿ ಸುವೇಂದು ಅಧಿಕಾರಿ ಆಪ್ತನಿಗೆ ಮಮತಾ ಮನವಿ!
ಈ ಹಿಂದಿನ ವರದಿಯಲ್ಲಿ ಶನಿವಾರ ಸಂಜೆ 5 ಗಂಟೆಯವರೆಗೆ ಶೇ.79.79 ರಷ್ಟು ಮತದಾನ ದಾಖಲಾಗಿತ್ತು. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6.30 ಕ್ಕೆ ಮುಕ್ತಾಯಗೊಂಡಿತ್ತು.
ಈ ಕುರಿತಂತೆ ಇಂದು ಪರಿಷ್ಕತ ಮತದಾನ ವರದಿ ನೀಡಿದ ಕೇಂದ್ರ ಚುನಾವಣಾ ಅಧಿಕಾರಿಗಳು, ಮತದಾನವು ಕೆಲವು ವಿರಳ ಹಿಂಸಾಚಾರಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿತ್ತು ಎಂದು ಹೇಳಿದ್ದಾರೆ.
ಶನಿವಾರ ಮತದಾನ ನಡೆದ 30 ಕ್ಷೇತ್ರಗಳ ಪೈಕಿ ಒಂಬತ್ತು ಕ್ಷೇತ್ರಗಳು ಪುರುಲಿಯಾ ಜಿಲ್ಲೆಯಲ್ಲಿದ್ದು, ನಾಲ್ಕು ಬಂಕುರಾ ಮತ್ತು ಜಾರ್ಗ್ರಾಮ್, ಪಾಸ್ಚಿಮ್ ಮದಿನಿಪುರದಲ್ಲಿ ಆರು ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿದ್ದವು.
ಇನ್ನು ಮತದಾನದ ವೇಳೆ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.