HEOC: ಕರ್ನಾಟಕದಲ್ಲಿ ಅತ್ಯಾಧುನಿಕ 'ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ' ಲೋಕಾರ್ಪಣೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಆರೋಗ್ಯ ಇಲಾಖೆ ಸಜ್ಜ್ಆಗಿದೆ. ಇ ನಿಟ್ಟಿನಲ್ಲಿ ಅತ್ಯಾಧುನಿಕ 'ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ' (Health Emergency Operations Centre- HEOC) ಇಂದು ಲೋಕಾರ್ಪಣೆ ಮಾಡಿ ಇಲಾಖೆಯು ಮೈಲಿಗಲ್ಲು ಸಾಧಿಸಿದೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಸ್ಥಾಪಿಸಲಾಗಿರುವ ಈ ಕೇಂದ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು. ರಾಜ್ಯದ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ. ದೇಶವು ಸಾಂಕ್ರಾಮಿಕ ರೋಗಗಳು ಮತ್ತು ಪ್ರಕೃತಿ ವಿಕೋಪಗಳು ಸೇರಿದಂತೆ ವಿವಿಧ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಅತೀ ಹೆಚ್ಚು ಅಪಾಯಕ್ಕೊಳಗಾಗುವ ರಾಷ್ಟ್ರವಾಗಿದೆ.

ಕೋವಿಡ್-19 ಮಹಾಮಾರಿಯು ಆರೋಗ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಯಲ್ಲಿದ್ದ ಅಗತ್ಯತೆಗಳನ್ನು ಎತ್ತಿ ತೋರಿಸಿತ್ತು. ಈ ಸವಾಲುಗಳನ್ನು ಎದುರಿಸಲು ಭಾರತ ಸರ್ಕಾರದ 'ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್' (PM-ABHIM) ಅಡಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ನಿರ್ಧಾರ, ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಹಾಗೂ ನೈಜ-ಸಮಯದ ಮಾಹಿತಿ ನಿರ್ವಹಣೆಗೆ ಇದು ಕೇಂದ್ರಿಯ ನಿಯಂತ್ರಣ ಘಟಕವಾಗಿ ಕಾರ್ಯ ನಿರ್ವಹಿಸಲಿದೆ. ಇಂತಹ ಅತ್ಯಾಧುನಿಕ ಕೇಂದ್ರವನ್ನು ಸ್ಥಾಪಿಸಿ ಕಾರ್ಯಾರಂಭಗೊಳಿಸಿರುವ ದೇಶದ ಮೊದಲ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಕೇಂದ್ರದಿಂದ 24x7 ನಿರಂತರ ಮೇಲ್ವಿಚಾರಣೆ
ಹಿಂದಿನ ವ್ಯವಸ್ಥೆಯಲ್ಲಿ ಪ್ರತಿಕ್ರಿಯೆಗಳು ವಿಭಜಿತವಾಗಿದ್ದವು. ನೈಜ-ಸಮಯದ ಮಾಹಿತಿಯ ಕೊರತೆಯಿತ್ತು. ಆದರೆ ಈ ಹೊಸ HEOC ಕೇಂದ್ರವು 24x7 ನಿರಂತರ ಮೇಲ್ವಿಚಾರಣೆ ನಡೆಸಲಿದೆ. ಏಕೀಕೃತ ಸಂವಹನ ಮತ್ತು ತ್ವರಿತ ಸಂಪನ್ಮೂಲ ನಿಯೋಜನೆಗೆ ಅವಕಾಶ ಕಲ್ಪಿಸಿದೆ. ಇದು ಪ್ರತಿಕ್ರಿಯಾತ್ಮಕ ವ್ಯವಸ್ಥೆಯಿಂದ ಪೂರ್ವಸಿದ್ಧತಾ ಆಧಾರಿತ ವ್ಯವಸ್ಥೆಗೆ (Pro-active system) ಪರಿವರ್ತನೆಗೊಳ್ಳುವ ಪ್ರಮುಖ ಹೆಜ್ಜೆ ಇದಾಗಿದೆ.
ಅತ್ಯಾಧುನಿಕ ಸೌಲಭ್ಯ ಒಳಗೊಂಡ ಕೇಂದ್ರ
ಬೆಂಗಳೂರು ಆರೋಗ್ಯ ಸೌಧದಲ್ಲಿರುವ ಈ ಕೇಂದ್ರವು ಉನ್ನತ ಗುಣಮಟ್ಟದ ವೀಡಿಯೋ ವಾಲ್, ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ, ಡೇಟಾ ಸರ್ವರ್, ನೆಟ್‌ವರ್ಕ್ ವ್ಯವಸ್ಥೆ ಮತ್ತು ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳನ್ನು ಹೊಂದಿದೆ. ತುರ್ತು ಕರೆ ನಿರ್ವಹಣೆ ಮತ್ತು ಸಂಪೂರ್ಣ ಮೇಲ್ವಿಚಾರಣೆಗೆ ಬೇಕಾದ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.
ಜಿಲ್ಲಾಮಟ್ಟದಲ್ಲೂ ಕೇಂದ್ರ ತೆರೆಯಲು ಚಿಂತನೆ
ಈ ಕೇಂದ್ರದ ಯಶಸ್ವಿ ಕಾರ್ಯಾಚರಣೆಗೆ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಜಿಲ್ಲಾಡಳಿತಗಳು ಕೈಜೋಡಿಸಿವೆ. ವಾಚ್ ಮೋಡ್, ಅಲರ್ಟ್ ಮೋಡ್, ಪ್ರತಿಕ್ರಿಯೆ ಮೋಡ್ ಮತ್ತು ಪುನಶ್ಚೇತನ ಮೋಡ್ ಎಂಬ ನಾಲ್ಕು ಹಂತಗಳಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ. ರಾಜ್ಯಮಟ್ಟದ ಈ ಕೇಂದ್ರಿಯ ನಿಯಂತ್ರಣ ಕೇಂದ್ರವು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟಕ್ಕೂ ವಿಸ್ತರಣೆಗೊಳ್ಳಲಿದೆ. ಪ್ರತೀ ಜಿಲ್ಲೆಯಲ್ಲೂ ನೋಡಲ್ ಅಧಿಕಾರಿಗಳ ಮೂಲಕ ಸಂಪರ್ಕ ಸಾಧಿಸಲಿದೆ.
ಒಟ್ಟಾರೆಯಾಗಿ, ಈ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವು ತಂತ್ರಜ್ಞಾನ ಮತ್ತು ಸಮನ್ವಯದ ಮೂಲಕ ಭವಿಷ್ಯದ ಆರೋಗ್ಯ ಸವಾಲುಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಕರ್ನಾಟಕವು ಈ ಯೋಜನೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿದ್ದು, ಭವಿಷ್ಯದ ಆರೋಗ್ಯ ಭದ್ರತಾ ವ್ಯವಸ್ಥೆಗೆ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಆರೋಗ್ಯ ಇಲಾಖೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.













Click it and Unblock the Notifications