ನಂದಿಗ್ರಾಮ್ ಕ್ಷೇತ್ರದಲ್ಲಿ ಯಾರು ಹೊರಗಿನವರು: ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್.08: ಪಶ್ಚಿಮ ಬಂಗಾಳಕ್ಕೆ ಗುಜರಾತ್‌ನಿಂದ ಬಂದವರು ಹೊರಗಿನವರೇ ಹೊರತು ನಾವುಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾರತೀಯ ಜನತಾ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ತಾವು ಸ್ಪರ್ಧಿಸಿರುವ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಗುಜರಾತ್ ನಿಂದ ಬಂದವರಿಗಾಗಿ ತಮ್ಮನ್ನು ತಾವು ಮಾರಾಟ ಮಾಡಿಕೊಂಡಿರುವ ನಾಯಕರು ನಂದಿಗ್ರಾಮ್ ಕ್ಷೇತ್ರದ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಕೋಮುವಾದವನ್ನೇ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಟಿಎಂಸಿ ಸರ್ಕಾರದ ಸಚಿವರೇ ಆಗಿದ್ದ ಸುವೇಂದು ಅಧಿಕಾರಿ ಇತ್ತೀಚಿಗಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿತ್ತು. ಧೈರ್ಯವಿದ್ದಲ್ಲಿ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಮತಾ ಬ್ಯಾನರ್ಜಿಯವರಿಗೆ ಸುವಂದು ಅಧಿಕಾರಿ ಸವಾಲು ಹಾಕಿದ್ದರು. ಈ ಹಿನ್ನೆಲೆ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಅವರು ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ.

ಸುವಂದು ಅಧಿಕಾರಿ ವಿರುದ್ಧ ಪರೋಕ್ಷ ವಾಗ್ದಾಳಿ:
ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜನರ ಒತ್ತಾಯದ ಮೇರೆಗೆ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿದರು. "ನಂದಿಗ್ರಾಮ್ ನಲ್ಲಿ ಕೆಲವರು ನನ್ನನ್ನು ಹೊರಗಿದವರು ಎಂದು ಹೇಳಿದರು. ಆ ಮಾತನ್ನು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ಹುಟ್ಟಿ ಬೆಳೆದದ್ದು ಪಕ್ಕದ ಬಿರ್ಭಮ್ ಜಿಲ್ಲೆಯಲ್ಲಿ, ಮತ್ತು ನನ್ನನ್ನು ಹೊರಗಿನವನೆಂದು ಕರೆಯುವ ವ್ಯಕ್ತಿ ಕೂಡ ಇಲ್ಲಿ ಹುಟ್ಟಿಲ್ಲ. ಇಂದು ನಾನು ಹೊರಗಿನವರಾಗಿಗಿದ್ದೇವೆ. ಗುಜರಾತ್‌ನಿಂದ ಬರುವವರು ಬಂಗಾಳದಲ್ಲಿ ಒಳಗಿನವರಾಗಿದ್ದಾರೆ" ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.












Click it and Unblock the Notifications