ಪ.ಬಂಗಾಳದಲ್ಲಿ ಹಿಂಸಾಚಾರ ಪ್ರಕರಣ: ಶವಪರೀಕ್ಷಾ ವರದಿಯಲ್ಲಿದೆ ಭಯಾನಕ ಸತ್ಯ
ರಾಮಪುರಹತ್, ಪಶ್ಚಿಮ ಬಂಗಾಳ ಮಾರ್ಚ್ 24: ಪಶ್ಚಿಮ ಬಂಗಾಳದ ರಾಮ್‌ಪುರಹತ್‌ನಲ್ಲಿ ಮಂಗಳವಾರ (ಮಾರ್ಚ್ 22) ನಡೆದ ಹಿಂಸಾಚಾರದಲ್ಲಿ ಮಡಿದ ಎಂಟು ಜನರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ. ವರದಿಯಲ್ಲಿ ಎಂಟು ಜನರನ್ನು ಹತ್ಯಾಕಾಂಡಕ್ಕೂ ಮೊದಲು ತೀವ್ರವಾಗಿ ಥಳಿಸಲಾಗಿದೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಸಜೀವ ದಹನಕ್ಕೊಳಗಾದ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರ ಹತ್ಯಾಕಾಂಡಕ್ಕೂ ಮೊದಲು ತೀವ್ರವಾಗಿ ಥಳಿಸಲಾಗಿದೆ ಎಂದು ಅವರ ಮರಣೋತ್ತರ ಪರೀಕ್ಷೆ ಅಥವಾ ಫೋರೆನ್ಸಿಕ್ ಪರೀಕ್ಷೆಯಿಂದ ತಿಳಿದುಬಂದಿದೆ.
ಮಂಗಳವಾರ ಮುಂಜಾನೆ ಅಪರಿಚಿತರಿಂದ ಬೆಂಕಿ ಹಚ್ಚಲಾಗಿದೆ ಎನ್ನಲಾದ ಮನೆಗಳಲ್ಲಿ ಸುಟ್ಟು ಕರಕಲಾದ ಶವಗಳ ಪರೀಕ್ಷೆಯನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಕೆಟ್ಟದಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಯಿತು ಎಂದು ರಾಂಪುರ್ಹತ್ ಆಸ್ಪತ್ರೆಯಿಂದ ಅಧಿಕಾರಿಯೊಬ್ಬರು ಪಿಟಿಐ ಸಂಸ್ಥೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಈ ಹತ್ಯೆ ಸೋಮವಾರ (ಮಾರ್ಚ್ 21) ಸಂಜೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆಯಿಂದ ಪ್ರಚೋದಿಸಲ್ಪಟ್ಟಿದೆ ಎಂದು ಶಂಕಿಸಲಾಗಿದೆ. ಈ ಘಟನೆಯ ಬಳಿಕ ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ನಿರ್ಲಕ್ಷ್ಯದ ಆಧಾರದ ಮೇಲೆ ಕೆಲಸದಿಂದ ತೆಗೆದುಹಾಕಲಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಂದು ರಾಮಪುರಹತ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮ್‌ಪುರಹತ್‌ದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬೊಗ್ಟುಯ್‌ಗೆ ಭೇಟಿ ನೀಡುವ ಮೊದಲು ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವೀಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಅವರು ಗಾಯಾಳುಗಳನ್ನು ಭೇಟಿ ಮಾಡಲು ರಾಮ್‌ಪುರಹತ್ ಆಸ್ಪತ್ರೆಗೆ ಭೇಟಿ ನೀಡಬಹುದು ಎನ್ನಲಾಗುತ್ತಿದೆ.
ಜೊತೆಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮತ್ತು ಬಿಜೆಪಿಯ ಐದು ಸದಸ್ಯರ ಕೇಂದ್ರ ತಂಡವೂ ಬೊಗ್ಟುಯ್‌ಗೆ ಭೇಟಿ ನೀಡಲಿದೆ. ತಪ್ಪಿತಸ್ಥರನ್ನು ಕ್ಷಮಿಸಲಾಗುವುದಿಲ್ಲ ಎಂದು ಹೇಳಿರುವ ಮಮತಾ ಬ್ಯಾನರ್ಜಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹತ್ಯೆಯನ್ನು ಘೋರ ಕೃತ್ಯ ಎಂದು ಹೇಳಿದ್ದಾರೆ.
ಇನ್ನೂ ರಾಮ್‌ಪುರಹತ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ವರದಿ ಒಪ್ಪಿಸುವಂತೆ ಸೂಚಿಸಿದ್ದರು. ಅವರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. "ಭಯಾನಕ ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ಭರಾಟೆ ರಾಮ್‌ಪುರಹತ್ ಬೀರ್ಭುಮ್ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ಹಿಂಸಾಚಾರ ಕಾನೂನುಬಾಹಿರತೆಯ ಹಿಡಿತದಲ್ಲಿದೆ ಎಂದು ಸೂಚಿಸುತ್ತದೆ. ಈಗಾಗಲೇ ಎಂಟು ಜೀವಗಳನ್ನು ಇದು ಬಲಿಪಡೆದುಕೊಂಡಿದೆ" ಎಂದು ಹೇಳಿದರು. ಜೊತೆಗೆ ಅವರು ಮುಖ್ಯ ಕಾರ್ಯದರ್ಶಿಯಿಂದ ಘಟನೆಯ ಬಗ್ಗೆ ತುರ್ತು ಮಾಹಿತಿಯನ್ನು ಕೋರಿದ್ದರು. ಈ ಬಗ್ಗೆ ರಾಜಕೀಯ ವಾಕ್ಸಮರ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಮಮತಾ ಇಂದು ಸ್ಥಳಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ.












Click it and Unblock the Notifications