ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ 'ವಿಷಸರ್ಪ'ದ ಬಿರುದು!
ಕೋಲ್ಕತ್ತಾ, ಜುಲೈ.05: ಭಾರತದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂದು 'ವಿಷಕಾರಿ ಸರ್ಪ'ದಷ್ಟೇ ಅಪಾಯಕಾರಿ ಎಂದು ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಬಂಕೂರಾ ಪ್ರದೇಶದಲ್ಲಿ ನಡೆದ ರ್ಯಾಲಿ ವೇಳೆ ಮಾತನಾಡಿದ ಸಂಸದ ಕಲ್ಯಾಣ್ ಬ್ಯಾನರ್ಜಿ, ಕೇಂದ್ರ ಹಣಕಾಸು ಸಚಿವೆ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ಹನಿವು ಹೇಗೆ ಎಲ್ಲರನ್ನೂ ಕೊಲ್ಲುತ್ತದೆಯೋ ಅದೇ ರೀತಿ ನಿರ್ಮಲಾ ಸೀತಾರಾಮನ್ ಅವರಿಂದ ದೇಶದ ಆರ್ಥಿಕತೆಯ ಕೊಲೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
2019ಕ್ಕೂ ಮೊದಲು ಇಲ್ಲಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಭಾರತ ನಿರ್ಮಾಣದ ಭರವಸೆ ನೀಡಿದ್ದರು. ಹೌದು, ಇದೀಗ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿಯೇ ದೇಶದ ಜಿಡಿಪಿ ಶೇ.1ಕ್ಕೆ ಕುಸಿದಿದೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೇ ಕಾರಣ ಎಂದು ಸಂಸದ ಕಲ್ಯಾಣ ಬ್ಯಾನರ್ಜಿ ದೂಷಿಸಿದ್ದಾರೆ.

ಸಚಿವ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಆಗ್ರಹ:
ವಿಷಕಾರಿ ಸರ್ಪದಂತೆ ಇರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕತೆಗೆ ಕಚ್ಚಿದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನು ನರಳಿ ನರಳಿ ಪ್ರಾಣ ಬಿಡುವಂತೆ ಆಗಿದೆ. ಇವರು ಯಾವ ಸೀಮೆ ಆರ್ಥಿಕ ಸಚಿವರೋ ಏನೋ. ಇಷ್ಟೆಲ್ಲ ನಡೆದರೂ ಕುರ್ಚಿಯಲ್ಲಿ ಮುಂದುವರಿಯುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲವೇ. ನಿರ್ಮಲಾ ಸೀತಾರಾಮನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ವಾರೆಂಟೈನ್ ಗೆ ತೆರಳಬೇಕು ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.












Click it and Unblock the Notifications