ಈ ದೇಶಕ್ಕೆ ನರೇಂದ್ರ ಮೋದಿ 'ದೊಡ್ಡ ಅಪಾಯ': ಮಮತಾ ಬ್ಯಾನರ್ಜಿ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಮೇ 13: ಈ ದೇಶಕ್ಕೆ ನರೇಂದ್ರ ಮೋದಿ 'ದೊಡ್ಡ ಅಪಾಯ'. ಪಶ್ಚಿಮ ಬಂಗಾಲದಲ್ಲಿ ಯಾವುದೇ ಹಿಂಸಾಚಾರ ಆಗದಂತೆ ನೋಡಿಕೊಳ್ಳಲು ನನ್ನ ಪ್ರಾಣವನ್ನಾದರೂ ಕೊಡ್ತೀನಿ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ನನ್ನ ಸಂಬಂಧಿಯನ್ನು ಹಾಗೂ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್ ಬ್ಯಾನರ್ಜಿಯನ್ನು ಬಿಜೆಪಿ ಗುರಿ ಮಾಡಿಕೊಂಡಿದೆ ಎಂದು ಮಮತಾ ಆರೋಪಿಸಿದ್ದಾರೆ. ಡೈಮಂಡ್ ಹಾರ್ಬರ್ ನಲ್ಲಿ ಹಿಂಸಾಚಾರ ಆರಂಭಿಸುವುದು ಮೋದಿ ಗುರಿ. ಈ ಕೆಲಸಕ್ಕೆ ಅದೆಷ್ಟು ಹಣ ಖರ್ಚು ಮಾಡುವುದಕ್ಕೂ ಅವರು ಸಿದ್ಧರಾಗಿದ್ದಾರೆ ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಏನಾಗಬೇಕು? ಅವರು ದೇಶಕ್ಕೆ ಅತಿ ದೊಡ್ದ ಅಪಾಯ. ಪಶ್ಚಿಮ ಬಂಗಾಲದಲ್ಲಿ ಎಲ್ಲ ಧರ್ಮದವರು ಒಟ್ಟಾಗಿ ಬಾಳುತ್ತಿದ್ದಾರೆ. ರಾಜ್ಯದಲ್ಲಿ ಯಾವ ಹಿಂಸಾಚಾರವೂ ನಡೆಯದಂತೆ ನೋಡಿಕೊಳ್ಳಲು ನನ್ನ ಜೀವ ನೀಡಲೂ ಸಿದ್ಧ ಎಂದು ಮಮತಾ ಹೇಳಿದ್ದಾರೆ.

ನಾನು ಮುಸ್ಲಿಮರನ್ನು ಓಲೈಸುತ್ತೇನೆ ಎಂದು ಜನರು ಆರೋಪಿಸುತ್ತಾರೆ. ಓಲೈಕೆ ಅಂದರೇನು? ಮುಸ್ಲಿಮರು ಸಹ ಈ ರಾಜ್ಯದ ಜನರೇ. ಬಿಜೆಪಿಯು ಎಂಥ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. "ಆತ ಮಾಡಿದ ತಪ್ಪೇನು? ಆತ ನನ್ನ ಕುಟುಂಬದ ಸದಸ್ಯ ಮತ್ತು ರಾಜಕಾರಣದಲ್ಲಿ ಭಾಗಿಯಾಗಿದ್ದಾರೆ" ಎಂದು ತಮ್ಮ ಸಂಬಂಧಿ ಚುನಾವಣೆಗೆ ಸ್ಪರ್ಧಿಸಿರುವುದನ್ನು ಸಮರ್ಥಿಸಿಕೊಂಡರು.
ಒಂದು ವೇಳೆ ನೀವು 'ಚೌಕೀದಾರ್'ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರೆ ಅವರಿಂದ ದೇಶವು ನಾಶವಾಗುತ್ತದೆ. ಬಿಜೆಪಿಗೆ ಒಂದು ಮತ ಕೂಡ ನೀಡದೆ ಅವರನ್ನು ತೊಲಗಿಸಬೇಕು. ಬಿಜೆಪಿಯು ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಮತ್ತು ಪತ್ರಕರ್ತರನ್ನು ಸಹ ಕೊಂದಿದೆ ಎಂದು ಆಕೆ ಆರೋಪಿಸಿದರು.












Click it and Unblock the Notifications