ಗಂಟಲು ಸೀಳಿದರೂ ಜೈ ಬಂಗಾಳ ಎಂದು ಕೂಗುವೆ: ಅಭಿಷೇಕ್ ಬ್ಯಾನರ್ಜಿ
ಕೋಲ್ಕತ್ತಾ, ಫೆಬ್ರವರಿ.13: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಭಾರತೀಯ ಜನತಾ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ.
ದಕ್ಷಿಣ ಕೋಲ್ಕತ್ತಾದ ಸೋನಾರ್ ಪುರ್ ನಲ್ಲಿ ರೋಡ್ ಶೋ ನಡೆಸಿದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಹಣದಿಂದ ಮತಗಳನ್ನು ಖರೀದಿಸಿದ್ದೇವೆ ಎಂದು ತಿಳಿದುಕೊಂಡಿದ್ದಾರೆ. ನೀವು ಅವರಿಂದ ಹಣವನ್ನು ಪಡೆದುಕೊಳ್ಳಿರಿ. ಆದರೆ ನಿಮ್ಮ ಮತಗಳನ್ನು ಟಿಎಂಸಿ ಚಿಹ್ನೆಗೆ ನೀಡಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಸಂಸದ ದಿನೇಶ್ ತ್ರಿವೇದಿ ರಾಜೀನಾಮೆ
ಹೊರಗಿನಿಂದ ಬಂದವರು ಪಶ್ಚಿಮ ಬಂಗಾಳದಲ್ಲಿ ತಮ್ಮ ಸಂಸ್ಕೃತಿಯನ್ನು ಹೇರುವುದಕ್ಕೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಇದರ ವಿರುದ್ಧ ನಡೆಯುವ ಹೋರಾಟವಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ನಾಲಗೆ ಕತ್ತರಿಸಿದರೂ "ಜೈ ಬಂಗಾಳ"ದ ಘೋಷಣೆ:
"ನನ್ನ ಗಂಟಲು ಸೀಳಿದರೂ ನಾನು ಜೈ ಬಂಗಾಳ ಮತ್ತು ಜೈ ಮಮತಾ ಬ್ಯಾನರ್ಜಿ ಎಂದೇ ಕೂಗುತ್ತೇನೆ. ಯಾವುದೇ ಕಾರಣಕ್ಕೂ ದೆಹಲಿಯವರ ಮುಂದೆ ನಾವು ತಲೆ ಬಾಗುವಂತೆ ಮಾಡುವುದಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಕೂಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 2021ರಲ್ಲೇ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗವು ಫೆಬ್ರವರಿ ಕೊನೆಯ ವಾರದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಆಟ ಶುರುವಾಗಿದೆ.