ಆಗ ಸಿಪಿಎಂನವರು ಹೊಡೆದರು, ಈಗ ಬಿಜೆಪಿಯವರು ನನಗೆ ಹೊಡೆಯುತ್ತಿದ್ದಾರೆ: ಮಮತಾ ಬ್ಯಾನರ್ಜಿ
ಕೋಲ್ಕತಾ, ಮಾರ್ಚ್ 17: ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮನ್ನು ಮನೆಯೊಳಗೇ ಇರುವಂತೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಝಾರ್ಗ್ರಾಮ್ ಜಿಲ್ಲೆಯ ಗೋಪಿಬಳ್ಳವಪುರ್‌ನಲ್ಲಿ ಬುಧವಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮಮತಾ, ನಂದಿಗ್ರಾಮದ ಘಟನೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೊದಲು ಸಿಪಿಎಂ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸುತ್ತಿತ್ತು ಎಂದಿದ್ದಾರೆ.
'ಬಿಜೆಪಿಯವರು ನಾನು ಮನೆಯ ಒಳಗೆ ಇರಬೇಕು, ನಾನು ಚುನಾವಣೆ ವೇಳೆ ಹೊರಗೆ ಬರಬಾರದು ಎಂದು ಬಯಸುತ್ತಿದೆ. ಅವರು ನನ್ನ ಕಾಲಿಗೆ ಗಾಯ ಮಾಡಿದ್ದಾರೆ. ಆದರೆ ಅವರು ನನ್ನ ಧ್ವನಿಯನ್ನು ಹಿಸುಕಲು ಸಾಧ್ಯವಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ' ಎಂದು ಹೇಳಿದ್ದಾರೆ.

'ನನ್ನ ಜೀವನದಲ್ಲಿ ನಾನು ಅನೇಕ ಬಾರಿ ಏಟು ತಿಂದಿದ್ದೇನೆ. ಈ ಮೊದಲು ಸಿಪಿಎಂ ನನಗೆ ಹೊಡೆಯುತ್ತಿತ್ತು. ಈಗ ಬಿಜೆಪಿ ಅದನ್ನೇ ಮಾಡಲು ಶುರುಮಾಡಿದೆ. ಆದರೆ ಸಿಪಿಎಂನ ಜನರೇ ಈಗ ಬಿಜೆಪಿಯವರು ಆಗಿದ್ದಾರೆ. ಕೆಲವು ವಂಚಕರು, ಆಸೆಬುರುಕ ಜನರು ಕೂಡ ಬಿಜೆಪಿ ಸೇರಿಕೊಂಡಿದ್ದಾರೆ' ಎಂದು ಮಮತಾ ಟೀಕಿಸಿದ್ದಾರೆ.
'ಅವರು ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಹೇರುತ್ತಾರೆ. ನನ್ನ ತಂದೆಯ ಜನ್ಮ ಪ್ರಮಾಣಪತ್ರವನ್ನು ಅವರು ಕೇಳುತ್ತಾರೆ. ಅದನ್ನು ನಾನು ಎಲ್ಲಿಂದ ತರುವುದು? ಹಿಂದಿನ ಕಾಲದ ಸ್ಥಿತಿ ಹೀಗಿತ್ತು. ಮನೆಯಲ್ಲಿಯೇ ಜನರು ಹುಟ್ಟುತ್ತಿದ್ದರು. ಜನರಿಗೆ ಪ್ರಮಾಣಪತ್ರವೂ ಸಿಗುತ್ತಿರಲಿಲ್ಲ' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications