Breaking: ರಾಮ್‌ಪುರಹತ್ ಹತ್ಯಾಕಾಂಡದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ
ಕೋಲ್ಕತ್ತಾ, ಮಾರ್ಚ್ 25: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿ ನಡೆದಿರುವ 8 ಜನರ ಹತ್ಯಾಕಾಂಡ ಪ್ರಕರಣದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಸುಮೋಟೋ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಹತ್ಯಾಕಾಂಡದ ಬಗ್ಗೆ ಕೇಂದ್ರೀಯ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಆದೇಶಿಸಿದ್ದು, ಏಪ್ರಿಲ್ 7ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಬುಧವಾರ ವಕೀಲ ಅನಿಂದ್ಯಾ ಕುಮಾರ್ ದಾಸ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜೊತೆಗೆ ಮುಖ್ಯ ನ್ಯಾ.ಪ್ರಕಾಶ್ ಶ್ರೀವಾಸ್ತವ್ ಮತ್ತು ನ್ಯಾ. ರಾಜರ್ಷಿ ಭಾರದ್ವಾಜ್ ನೇತೃತ್ವದ ವಿಭಾಗೀಯ ಪೀಠವು ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿತು. ಶುಕ್ರವಾರ ಈ ಕುರಿತು ಆದೇಶ ಹೊರಟಿಸಿರುವ ಕೋರ್ಟ್, ಎಸ್ಐಟಿಯಿಂದ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸುವಂತೆ ಸೂಚಿಸಿದೆ.
ಎಸ್ಐಟಿಯಿಂದ ಸಿಬಿಐಗೆ ಪ್ರಕರಣ:
ರಾಮ್‌ಪುರಹತ್‌ನಲ್ಲಿ ನಡೆದಿರುವ ಹತ್ಯಾಕಾಂಡ ಪ್ರಕರಣವನ್ನು ಈವರೆಗೂ ರಾಜ್ಯ ಸರ್ಕಾರವೇ ರಚಿಸಿರುವ ವಿಶೇಷ ತನಿಖಾ ತಂಡವೇ ತನಿಖೆ ನಡೆಸುತ್ತಿತ್ತು. ಇದೀಗ ಸಿಬಿಐಗೆ ಹಸ್ತಾಂತರಿಸಿದ ನಂತರ ಈ ಪ್ರಕರಣದಲ್ಲಿ ಯಾವುದೇ ಹೆಚ್ಚಿನ ತನಿಖೆ ನಡೆಸದಂತೆ ಕೋರ್ಟ್ ಆದೇಶಿಸಿದೆ.

ಬಿರ್ಭುಮ್ ಹತ್ಯಾಕಾಂಡ ಪ್ರಕರಣದ ಹಿನ್ನೆಲೆ:
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್ ಬ್ಲಾಕ್ 1ರ ಅಡಿಯಲ್ಲಿ ಬರೀಶಾಲ್ ಗ್ರಾಮ ಪಂಚಾಯತ್‌ನ ಉಪ ಪ್ರಧಾನ (ಟಿಎಂಸಿ) ಬದು ಶೇಖ್ ಮೇಲೆ ನಾಲ್ವರು ದುಷ್ಕರ್ಮಿಗಳು ಕಚ್ಚಾಬಾಂಬ್ ಎಸೆದು ಹತ್ಯೆ ಮಾಡಿದರು ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಖ್ ಅನ್ನು ರಾಮ್‌ಪುರಹತ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಂತಿಮವಾಗಿ ಶೇಖ್ ಮೃತದೇಹವನ್ನು ಬೊಗ್ಟುಯಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡರು.
ಈ ಘಟನೆ ಬೆನ್ನಲ್ಲೇ ರಾಮ್‌ಪುರಹತ್ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿತು. ರಾಮ್‌ಪುರಹತ್‌ನಲ್ಲಿ ಮಂಗಳವಾರ ಮುಂಜಾನೆ ಎಂಟು ಜನರು ತಮ್ಮ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯಲ್ಲಿದ್ದ ಹತ್ತು ಜನರ ಪೈಕಿ ಏಳು ಮಂದಿ ಮನೆಯಲ್ಲಿಯೇ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಪ್ರಾಣ ಬಿಟ್ಟಿದ್ದರು.












Click it and Unblock the Notifications