ಅಯ್ಯಯ್ಯೋ.. ಪಶ್ಚಿಮ ಬಂಗಾಳದಲ್ಲಿ ಹೀಗೆ ಯಾಕಾಯ್ತು ರಾಜಕಾರಣ?
ಕೋಲ್ಕತ್ತಾ, ಜನವರಿ.31: ಪಶ್ಚಿಮ ಬಂಗಾಳದ ಪ್ರಜೆಗಳು ತೃಣಮೂಲ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಯಾವತ್ತಿಗೂ ಕ್ಷಮಿಸಲಾರರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೀದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿಯು ಪೂರ್ಣ ಬಹುಮತದ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದಿಂದಲೇ ಸಾಕಷ್ಟು ಶಾಸಕರು ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಬರುತ್ತಿದ್ದಾರೆ. ಅಂದರೆ ನೀವು ಮಾಡುತ್ತಿರುವ ತಪ್ಪಿನ ಬಗ್ಗೆ ನೀವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮಮತಾ ಬ್ಯಾನರ್ಜಿಯವರ ವಿರುದ್ಧ ಅಮಿತ್ ಶಾ ಸಲಹೆ ನೀಡಿದರು.

"ಒಮ್ಮೆ ಹಿಂತಿರುಗಿ ನೋಡಿ ನಿಮ್ಮೊಂದಿಗೆ ಯಾರೂ ಇಲ್ಲ"
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ನಾಯಕರು ಬಿಜೆಪಿ ಕಡೆಗೆ ಮುಖ ಮಾಡುತ್ತಿದ್ದಾರೆ. ಒಮ್ಮೆ ನೀವು ಹಿಂತಿರುಗಿ ನೋಡಿ. ಮೊದಲ ನಿಮ್ಮೊಂದಿದ್ದ ನಾಯಕರೇ ಇದೀಗ ಅಲ್ಲಿಲ್ಲ. ಎಲ್ಲರೂ ಪಕ್ಷವನ್ನು ಬದಲಾಯಿಸಿದ್ದಾರೆ. 10 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿಯವರು ಬಗ್ಗೆ ರಾಜ್ಯದಲ್ಲಿದ್ದ ಚಿತ್ರಣ ಈಗಿಲ್ಲ ಎಂದು ಅಮಿತ್ ಶಾ ಹೇಳಿದರು.

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಕಠಿಣ ಕ್ರಮ
ಕಳೆದ ಜನವರಿ.23ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ 125ನೇ ಜನ್ಮದಿನದ ಹಿನ್ನೆಲೆ ಕಾರ್ಯಕ್ರಮದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರ ಬಗ್ಗೆ ಸ್ಮೃತಿ ಇರಾನಿ ಉಲ್ಲೇಖಿಸಿದರು. ನೀವು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ವಿರೋಧಿಸಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಾಮರಾಜ್ಯ ನಿರ್ಮಾಣದ ಕೆಲಸವು ಪಶ್ಚಿಮ ಬಂಗಾಳ ಬಾಗಿಲಿನಲ್ಲಿ ಬಂದು ನಿಂತಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಆದರೆ, ಸರ್ಕಾರ ಆಯೋಜಿಸಿದ ನೇತಾಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀರಾಮನ ಪರ ಘೋಷಣೆ ಕೂಗಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಟಿಎಂಸಿ ಬಗ್ಗೆ ಪ್ರೈವೇಟ್ ಲಿಮಿಟೆಡ್ ಎಂಬ ಹೇಳಿಕೆ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಇನ್ನು ಹೆಚ್ಚು ದಿನಗಳವರೆಗೂ ಪಕ್ಷವಾಗಿ ಮುಂದುವರಿಯುವುದಿಲ್ಲ ಎಂದು ಬಿಜೆಪಿಗೆ ಪಕ್ಷಾಂತರ ಆಗಿರುವ ಮಾಜಿ ಸಚಿವ ಸುವೇಂಧು ಅಧಿಕಾರಿ ಹೇಳಿದರು. ಅಲ್ಲದೇ, ಟಿಎಂಸಿ ಎನ್ನುವುದು ಪಕ್ಷವಲ್ಲ ಅದೊಂದು ಪ್ರೈವೇಟ್ ಕಂಪನಿಯಾಗಿದೆ. ಫೆಬ್ರವರಿ.28ರ ಬಳಿಕ ಈ ಕಂಪನಿಯಲ್ಲಿ ಎಲ್ಲ ಸ್ಥಾನಗಳು ಖಾಲಿ ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

TMC ಟು BJP ಹೀಗಿದೆ ಪಕ್ಷಾಂತರಗೊಂಡ ಶಾಸಕರ ಪಟ್ಟಿ
ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಟಿಎಂಸಿಯಿಂದ ಸಾಕಷ್ಟು ಶಾಸಕರು ಸಚಿವರು ಸೇರಿದಂತೆ ಹಲವು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ನಂದಿಗ್ರಾಮ್ ಕ್ಷೇತ್ರದ ಪ್ರಭಾವಿ ಶಾಸಕ ಸುವೇಂಧು ಅಧಿಕಾರಿ, ಶಾಸಕ ಲಕ್ಷ್ಮಿ ರತನ್ ಶುಕ್ಲಾ, ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬಿರ್ ಘೋಶಾಲ್, ರತಿನ್ ಚಕ್ರಬೊರ್ತಿ, ರುದ್ರಾಣಿ ಘೋಷ್ ಸೇರಿದಂತೆ ಈ ಶಾಸಕರ ಬೆಂಬಲಿಗರು ಕೂಡಾ ಬಿಜೆಪಗೆ ಸೇರ್ಪಡೆಯಾಗಿದ್ದರು. ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಈ ಎಲ್ಲ ನಾಯಕರ ಜೊತೆಗೆ ಬಿಜೆಪಿಯ ಕೈಲಾಶ್ ವಿಜಯ್ ವರ್ಗಿಯಾ ಕೂಡಾ ಉಪಸ್ಥಿತಿ ವಹಿಸಿದ್ದರು.












Click it and Unblock the Notifications